Skip to main content

Posts

Showing posts from February, 2018

*ನಿನ್ನ ನೆನಪು*

*ನಿನ್ನ ನೆನಪು* [07/02, 10:25 a.m.] ಮಲೆನಾಡ ಮೈಸಿರಿಯ ಪುಟ್ಟ ಬೆಟ್ಟದಾ ಮೇಲೆ ಎಕಾಂಗಿಯಾಗಿರಲೆನಗೆ ಮತ್ತೆ ಬಂದಿಹುದು ನಿನ್ನ ನೆನಪು ಮುಸ್ಸಂಜೆ ವೇಳೆಯಲಿ ಬೆಟ್ಟದಾ ಮರೆಯಲ್ಲಿ ಸಂಧ್ಯೆಯ ಸಂಧಿಸುವ ನೇಸರನು ಜ್ಞಾಪಿಸಿಹ ನಿನ್ನ ನೆನಪು ಸುಳಿ  ಸುಳಿದು ತಂಗಾಳಿ ಮುದದಿ ತನುವನು ಕೆಣಕಿ ಪಿಸುಮಾತನಾಡಿರಲು ಮನವನು ಕಾಡಿತ್ತು ನಿನ್ನ ನೆನಪು ಎಲ್ಲಿಂದಲೋ ತಾ ತೇಲಿ ಅಲೆ ಅಲೆಯಲಿ ಬರುತಿಹ ನಿನ್ನ ಇಂಚರ ಹೋಲುವ ವೇಣುಗಾನವು ತಂತು ನಿನ್ನ ನೆನಪು ಗೋಧೂಳಿಯ ರಂಗು ಬಾನೆಡೆಗೆ ಸಾಗಿರಲು ಆಗಸದಿ ಆಡುತಿಹ ಆ ಗಾಳಿಪಟದಂತಿಹುದು ನಿನ್ನ ನೆನಪು ನನ್ನ ಮುಸ್ಸಂಜೆಯಲು ಇನ್ನೇನು ಉಳಿದಿಹುದು ಎದೆಗೆ ಉಸಿರಿರುವವರೆಗು ಆಸರೆಯ ಒರತೆಯಿದು ನಿನ್ನ ನೆನಪು *** **** *** **** *** ✍🏼 ತ್ರಿನೇತ್ರಜ್  ಶಿವಕುಮಾರ. ಹಿರೇಮಠ

*ಅನುಪಮ*

ಹನಿ ಹನಿ ತುಂತುರು ತಿಂಗಳ ವಿಶೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಭಾವಗೀತೆ         *ಅನುಪಮ*        ಹೆಣ್ಣಾಗಿ ಮೂಡಿಹಳು ಅದಮ್ಯ ಸೌಮ್ಯ ಶಕ್ತಿಯೇ ಬಣ್ಣಿಸಲು ಅಸದಳವೊ ಭಾವನಾ ಅಂಬುದಿಯೇ |ಪ| ಮಗುವಾಗಿ ನಗುವಾಗಿ ಅಮಿತ ಅನಿತೆ ಪೂಜಿತೆ ಒಡಹುಟ್ಟಿದ ಜೀವಗಳಿಗೆ ಮಿಡಿವ ಪ್ರೇಮ ಶೋಭಿತೆ|೧| ಸ್ನೇಹ ತೋರಿ ಸಖಿಯಾಗಿ ಹೃದಯಗೆದ್ದ ಅರಸಿಯಾಗಿ ಬಾಳಿನ ಅರ್ಧಾಂಗಿಯಾಗಿ ಬಾಳಿಸುವಳು ಗೃಹಿಣಿಯಾಗಿ|೨| ಮನ ನಿನ್ನದು ಹೂವಂತೆ ತನುವದೋ ಲತೆಯಂತೆ ಬರಡನಳಿಸೊ ಸೆಲೆಯಂತೆ ಮನೆಗೆ ನಂದಾ ದೀಪದಂತೆ |೩| ಮಮತೆಗೆ ಮಾತೃರೂಪಿಣಿ ಕ್ಷಮೆಗೆ ಭೂ ಸ್ವರೂಪಿಣಿ ಜ್ಞಾನದೊಳು ಶ್ರೀ ವಾಣಿ ನಮಿಸುವೆ ಸೃಷ್ಟಿಕಾರಿಣಿ |೪|        ................. ✍🏼 ತ್ರಿನೇತ್ರಜ  ಶಿವಕುಮಾರ. ಹಿರೇಮಠ. 🥀🥀🥀🥀🥀 ಹನಿ ಹನಿಯ ತುಂತುರು ಕಾವ್ಯ ಲೋಕದಲಿ... ಮೈಮರೆಸುವ ಕವಿಹೃದಯಗಳ ಕಾವ್ಯಗಳ ಸಾಗರ ದಲ್ಲಿ ಮನವಿಂದು ಮಿಂದು ಧನ್ಯವಾಗಿದೆ... 🦋🦋🦋🦋🦋🦋 *ಹನಿ ಹನಿ ತುಂತುರು ತಿಂಗಳ ವಿಶೇಷ ಸ್ಪರ್ಧೆಯ ಫಲಿತಾಂಶಕ್ಕೆ ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ ಸುಸ್ವಾಗತ...*  *ಈ ತಿಂಗಳ  ಸ್ಪರ್ಧೆಯ ವಿಷಯ* *ಒಂದು ಹೆಣ್ಣು ಗಂಡಿನ ಜೀವನದಲ್ಲಿ ತಾಯಿಯಾಗಿ ತಂಗಿಯಾಗಿ ಮಡದಿಯಾಗಿ ಗೆಳತಿಯಾಗಿ ತಂಗಿಯಾಗಿ ಪ್ರೇಯಸಿಯಾಗಿ ಹೆಂಡತಿಯಾಗಿ ಗಂಡಿನ...

ದಾಸನಾದೆ ಅಂದಕೆ

ಭಾವಗೀತೆ   *ದಾಸನಾದೆ ಅಂದಕೆ*  ನನ್ನ ಕಲ್ಪನೆಯಲ್ಲಿ ಬಂತೊಂದು ಲೋಕ ನೀನದರ ಒಡತಿ ನಾನು ನಿನ್ನ ಸೇವಕ ||ಪ|| ಹಂಸ ತೂಲಿಕಾತಲ್ಪದಿ ಚಂದ್ರಕಾಂತಿಯ ಧರಿಸಿ ನೀ ಪವಡಿಸಿರೆ ನಗುತ ಹಾಡಿ ತೂಗುವೆ ಅರಸಿ ಗಾನದೊಳು ಮೈ ಮರೆಸಿ ಆಡಿಸುವೆ ಕನಸ ಬಿತ್ತರಿಸಿ||೧|| ಶ್ವೇತ ಸಾಗರ ವದನದಿ ಮತ್ಸ್ಯಕಂಗಳನಾಡಿಸಿ ಮಂದಸ್ಮಿತ ಬೀರುವೆ ಮಧುವಧರ ಅರಳಿಸಿ ವೈಯ್ಯಾರದಲೆನ್ನ ಸೋಲಿಸಿ ದಾಸನಾಗಿಸಿಹಳೆನ್ನ  ಸರಸಿ||೨|| ****   ****   ****  **** ✍🏼.. ತ್ರಿನೇತ್ರಜ್ ಶಿವಕುಮಾರ. ಹಿರೇಮಠ

*ಆನಂದನ ಗರ್ವಭಂಗ*

ಮಕ್ಕಳ ಗೀತೆ  *ಆನಂದನ ಗರ್ವಭಂಗ*  ಆಂಟಿಯ ಜೊತೆಗೆ ಪೇಟೆಗ್ಹೋಗಿ ಬೆಲೂನು ತಂದನು ಆನಂದ ಬೀದಿ ಮಕ್ಕಳ ಹೊಟ್ಟೆ ಉರಿಸಲು ಅವನಿಗೆ ಅದೇನೋ ಆನಂದ ಜಂಭದಿ ನಡೆದನು ಆಡುತ ಪುಗ್ಗೆಯ ಡುಬ್ಡುಬ್ ಡುಬ್ ಟುಬ್ ಬಡಿಯುತ್ತ ತನಗೆ ಸರಿಸಮ ಯಾರಿಲ್ಲೆಂದು ಎರಡ್ಹೆಜ್ಜೆಗೆ ಒಂದ್ಸಾರಿ ನೆಗೆಯುತ್ತ. ಅವನಾರ್ಭಟಕೆ ಬೀದಿಯ ನಾಯಿ ಗುರುಗುಟ್ಟಿ ಎಗರಿತು ಬೌ ಎಂದು ಚಿಟ್ಟನೆ ಚೀರಿ ಕೈಬಿಟ್ಟು ಬೆಲೂನು ಬೊಬ್ಬಿಟ್ಟನು ಬೆದರಿ ಆನಂದು ಹಾರಿತು ಪುಗ್ಗೆಯು ಎತ್ತರೆತ್ತರಕ್ಕೆ ತೆಂಗಿನ ಗರಿಚುಚ್ಚಿ ಢಬ್ಬ್ ಅಂತು ಮಕ್ಕಳೆಲ್ಲರೂ ಪಕಪಕ ನಕ್ಕರು ಆನಂದನ ಜಂಭವು ಠ್ಠುಸ್ಸಂತು ........ ....... ...... ....... ✍🏼 ತ್ರಿನೇತ್ರಜ್ ಶಿವಕುಮಾರ. ಹಿರೇಮಠ

ರಾಧಾಲಾಪ

ಭಾವಗೀತೆ                    *ರಾಧಾಲಾಪ*  ಮುನಿಸು ಬಂತೇ ಮೋಹನ ಈ ಬಾರಿ ಮನ್ನಿಸು ನನ್ನ. ಅನುಕ್ಷಣ ಎದೆತಾಳದಲಿ ನಿನ್ನದೇ ಧ್ಯಾನ ಮನತಣಿಸು ಬಾ ನುಡಿಸುತ ಕೊಳಲಗಾನ ||ಪ|| ಸೂರ್ಯನಿರೆ ನೂರುಕಣ್ಣು ಗಮನಿಸುವವು ಲೋಕದ ನಿಯಮಗಳೆನ್ನ ತಡೆಯುತಿಹವು ಬಾಲ್ಯವೇಕೆ ಕಳೆಯಿತು ಬೇಗ ನಾ ಕಾಣೆನೋ ಹರೆಯ ಬಂದು ಕಷ್ಟ ತಂತು ಏಕೊ ಏನೋ.||೧|| ಮುರಳಿಗಾನ ಕೇಳಲೆಂದೆ ಮುಸ್ಸಂಜೆಗೆ ನಿನ್ನ ಸಖ್ಯ ಅರಸಿ ಬಂದೆ ನಾನಿಲ್ಲಿಗೆ ತೋರದಿರು ಮುಗದೆಯ ಮೇಲೆ ಕೋಪ ಹೀಗೆ ಜೋತೆಗೂಡಿ ತೊಡೆಯೊ ನಲುಮೆಯಿಂದ ಮನದ ಬೇಗೆ.||೨|| -----  ---- --- ----- ✍🏼 ತ್ರಿನೇತ್ರಜ್  ಶಿವಕುಮಾರ. ಹಿರೇಮಠ.

*ಹರೆಯಾಗಮನ*

ಭಾವಗೀತೆ   *ಹರೆಯಾಗಮನ*  ಏನಿದು ಭಾವ ಎಂಥ ಮೋಹ ತುಂಬಿ ಬಂದ ಹರೆಯಕೆ ಏನೋ ಸೆಳೆತ ಎಂಥ ಸೋಜಿಗ ನವನವೀನ ಜೀವಕೆ ||ಪ|| ಸದಾ ಮನ ತೇಲುವುದು ಕಲ್ಪನಾ ಮುಗಿಲಲಿ ಕದಡಿ ಭಾವ ವಿರಹದಲಿ ತಾಪವೇರಿದೆ ತನುವಲಿ ಮಾತು ಕೇಳದು ನೆಲ ಕಾಣದು ಕನಸ ಲಹರಿ ಕಣ್ಣಲಿ ಮೈಮರೆವ ವಿಹಂಗಮ ರೋಮಾಂಚನದಾಸೆಯಲಿ||೧|| ಕನ್ನಡಿಯೂ ನಾಚುವಂತೆ ತಾಳ್ಮೆಯ ಸಿಂಗಾರವು ನೂರಾಸೆ ತುಂಬಿ ತುಂಬಿ ಮನವಿದೋ ಭಾರವು ನೆರೆಗೆ ಸಿಕ್ಕ ಹಾವಿನಂತೆ ತೀರದ ತೊಳಲಾಟವು ಸುಳಿಗೆ ಸಿಕ್ಕ ನಾವಿನಂತೆ ಎತ್ತಲೆತ್ತಲೋ ಸೆಳೆತವು. ||೨|| ✍🏼 ತ್ರಿನೇತ್ರಜ್  ಶಿವಕುಮಾರ. ಹಿರೇಮಠ

*ವಿದುರದ್ವಂದ್ವ*

ಭಾವಗೀತೆ         *ವಿದುರದ್ವಂದ್ವ*  ದೂರ ಹೋಗು ಸೋಮ ದೂಡಿಬಿಡು ನಿಯಮ ದುಗುಡು ತಂದಿದೆ ಬೆಳದಿಂಗಳಿಂದು ದುಃಖದುಬ್ಬರ ಪೂರ್ಣಿಮೆಯಂದು ಮದಿರೆ ಮಾತ್ರ ಮಧುರವಾಯ್ತು ಮನದನ್ನೆಯ ಆ ನೆನಪಿಗೆ ಮರಣವೆ ಮನಕೆ ಮಂತ್ರವಾಯ್ತು ಮಡದಿ ಇರದೀ ಬದುಕಿಗೆ ಮರೆಯಾಯಿತು ಮುತ್ತು ಮಸಣ ಸೇರಿತು ಮಾತು||೧|| ತೋರದೆ ಮುಖ   ತೋಳ್ಬೆಸುಗೆಯ ಹಿತ ತೊಳಲಾಟ ತಂದಳೇತಕೋ? ತೋರದೆ ಕರುಣೆ ತೊರೆದು ತಣ್ಣಗೆ ತೋರಿದಳು ಬೆನ್ನನೇತಕೋ? ತೊರೆಯಲೆ ಬದುಕು? ತೋಚದಾಯ್ತೆ ದಿಕ್ಕು.||೨|| ಕಣ್ಣಿಗೆ ಕಾಣದ ಕನಸಿಗೆ ನಿಲುಕದ ಕತ್ತಲೆದಾರಿಯ ಊರಿಗೆ ಕಲ್ಲು ಮನಸ್ಸಿನ ಕಟುಕನಾಗಲು ಕಂದನಾಗಿಹ ತಡೆ ಎನಗೆ ಕರಪಿಡಿದವಳ ಸೇರಲೆ? ಕಂಪನವ ಸಹಿಸಲೇ?||೩|| ----  ---- ----- ----  ✍🏼   ತ್ರಿನೇತ್ರಜ ಶಿವಕುಮಾರ ಹಿರೇಮಠ.

*ಕಬ್ಬಿಗನೊಡಲು ಕಾವ್ಯಕಡಲು*

*ಕಬ್ಬಿಗನೊಡಲು ಕಾವ್ಯಕಡಲು*  (ಯಾವ ಮೋಹನ ...ರಾಗದಲ್ಲಿ) ಕಬ್ಬಿಗನೊಡಲು ಕಾವ್ಯಕಡಲು ಸಾಹಿತ್ಯದ ರಸದೌತಣ. ಭಾವ ಸಾಗರ ಅಲೆಯ ಉಕ್ಕಿಸೊ ಕಾವ್ಯಗಳ ಸುಗ್ಗಿ ಕಣ. ಸ್ಪರ್ಧೆಗಿಳಿಯುವ ರಚನೆಗಳಿಗೆ ಬಳಗವಿದು ಕವಿ ಕಮ್ಮಟ. ಅಂತರಾಳದ ನುಡಿಯ ಹೊಮ್ಮಿಸಿ ಏರಿದೆ ಕನ್ನಡ ಬಾವುಟ. ಕಾವ್ಯ ಮತ್ತು ವಿಮರ್ಶೆಗೆಂದು ಜೊತೆಗೆ ಇದೆ ಸಹ ಬಳಗವು. ರಚಿತ ಬರಹವ ನೀಡಿ ಓದಲು ಸ್ವಾಗತ ಹಗಲೆಲ್ಲವು. ವಿಮರ್ಶೆ ಘಟಕವು ರಾತ್ರಿ ತೆರೆವುದು ಅರಿತುಕೊಳ್ಳಲು ಕವಿಮನ. ಅಂದವ ಮೆಚ್ಚಿ ದೋಷ ತೋರಿಸಿ ಬೆಳೆಸಿ ಬೆಳೆಯುವ ವಿಧಾನ. ✍🏼 ತ್ರಿನೇತ್ರಜ  ಶಿವಕುಮಾರ. ಹಿರೇಮಠ.

*ಪ್ರಾಣಸಖಿ*

ಭಾವಗೀತೆ           *ಪ್ರಾಣಸಖಿ*      --------------- ಬಾಲ್ಯದಲಿ ಜೊತೆಯಾದೆ, ಪ್ರಾಣಸಖಿ ಎನಗಾದೆ . ಏಕಾಂಗಿತನವನು ನೀ ಬಂದು ನೀಗಿದೆ. ಎನ್ನಯ ಒಡನಾಡಿಯಾದೆ. ನೆಚ್ಚಿನ ಒಡನಾಡಿಯಾದೆ.|ಪ| ಪಾಠದಲಿ ಜೊತೆಯಾದೆ, ಆಟದಲೂ ಬಲವಾದೆ; ರಂಗೋಲಿ ಕಲಿಸಿದೆ, ಜೋಕಾಲಿ ಜೀಕಿದೆ. ಅಮ್ಮ ಎನಗೆ ಬೈದಾಗ ಬೆನ್ನಸವರಿ ರಮಿಸಿದೆ. ಕೈಗೆನಗೆ ಮದರಂಗಿಯ ಹಾಕಿ ನೀ ಸಂಭ್ರಮಿಸಿದ್ದೆ.|೧| ನನ್ನ ಮದುವೆಯಲ್ಲಿ ಕುಣಿದು,ದಣಿದು; ನನ್ನ ಸಿಂಗರಿಸಿ, ನಕ್ಕೂ ನಲಿದು; ಪತಿಮನೆಗೆ ಹೊರಟಾಗ ಇಲ್ಲದ ನಗುತಂದು, ಮನದಲ್ಲೆ ಅಳುವ ನುಂಗಿದೆ. ಬಿಟ್ಟಿರಲು ನಾನೂ ನೊಂದೆ.|೨| ಉಸಿರಿರುವ ವರೆಗೂ ನಿನ್ನನೆಂದೂ ಮರೆಯೆ. ಸಾಯುವ ಮುನ್ನ ನಿನ್ನಕಾಣ ಬಯಸುವೆ. ಮತ್ತೊಂದು ಜನ್ಮದಲೂ ಮನ ನಿನ್ನ ಬಯಸಿದೆ. ಈ ಜೀವದ ಗೆಳತಿಯಾದೆ.|೩| ... ... ... ... ... ... ... ... ... ✍...ತ್ರಿನೇತ್ರಜ. ಶಿವಕುಮಾರ.ಹಿರೇಮಠ.

*ಕಬ್ಬಿಗನೊಡಲ ಹಾಡು*

ಬಳಗದ ಮೇಲೆ ಕವನ . (ಸ್ನೇಹದ ಕಡಲಲ್ಲಿ ಕರೋಕಿಗೆ)   *ಕಬ್ಬಿಗನೊಡಲ ಹಾಡು*   ಗಂಧದ ನಾಡಿನಲಿ ಕನ್ನಡ ನುಡಿಯಲ್ಲಿ ಕವನಗಳ ಬರೆವಾ ಬಳಗದಲಿ ಇಡುವಾ. ಚರ್ಚೆ ವಿಮರ್ಶೆಗೆ ಮನ್ನಣೆ ನೀಡಿ ಜ್ಞಾನವನು ಪಡೆವಾ(ಪ) ಕಾವ್ಯ ವಿಮರ್ಶೆ ಕವಿಬಳಗದಲಿ ಸಾಹಿತ್ಯದ ಹೊನಲು ಕಬ್ಬಿಗನೊಡಲು ಕಾವ್ಯದ ಕಡಲು ಸ್ಪರ್ಧೆಗೆ ಮೀಸಲು ಬಹುಮಾನವ ನೀಡಲು.|೧| ಲೇಖನ ಕಾವ್ಯ ಭಾವಗೀತೆ ಕಿರುಗತೆಯ ಘಮಲು. ನುಡಿಯ ಸೇವೆಗೆ ಪ್ರಥಮ ಕಾಣಿಕೆ ಬಂತು ಮೊದಲ ಮೊಗ್ಗು ಕವಿಮನಗಳ ಹಿಗ್ಗು.|೨| ತ್ರಿನೇತ್ರಜ್. ಶಿವಕುಮಾರ ಹಿರೇಮಠ

*ದುಡಿಮೆಯೆ ಬದುಕು*

 ಜಾನಪದ ಶೈಲಿ ಗೀತೆ   *ದುಡಿಮೆಯೆ ಬದುಕು* ದೆವ್ರ ಕೊಟ್ಟಾನ್ರೀ ನಮಗ ದುಡಿಯಾಕಂತ ಈ ಜಲ್ಮ ಬೆವ್ರ ಸುರ್ಸಿ ಬೆಳಿಯ ಬೆಳಿತೀವೋ|| ಲೋಕಕೆಲ್ಲ ಹೊಟ್ಟಿತುಂಬ ಅನ್ನ ಕೊಡತೀವೊ. |ಜಕ್ ನಕ ನಕ ಜಕ(೩) ಜಕ್ ನಕ ನ| ಬೆಳ್ಳಿಚುಕ್ಕಿ ಮೂಡುದುಕ ಹಟ್ಟಿಹುಂಜ ಕೂಗುದಕ ಹೊತ್ತಾರೆದ್ದು ಹೆಂಡಿಕಸ ಬಳದ್ಹಾಕಿ|| ನ್ಯಾರಿಮಾಡಿ ಬಸವನಕೂಡ ಹೊಲಕ ಹೋಗತೇವೋ. |ಜಕ್ ನಕ ನಕ ಜಕ(೩) ಜಕ್ ನಕ ನ| ಭೂತಾಯಿ ಮಡ್ಲಾಗ ಮೈಯ ಬಗ್ಗಿಸಿ ದಗದಾ ಮಾಡಿ ಬಂಗಾರದಂತ ಫಸಲ ಪಡದೇವೋ|| ಸುಗ್ಗಿಮಾಡಿ ಮನಿಗೆ ರಾಶಿ ಹೇರಕೊಂಡ ಬರತೇವೋ. |ಜಕ್ ನಕ ನಕ ಜಕ(೩) ಜಕ್ ನಕ ನ| ಕೋಟಿ ವಿದ್ಯಗಿಂತ ನಮ್ಮ ಮೇಟಿ ವಿದ್ಯ ಮೇಲಂತ ಹಿರಿಯರು ಹೇಳಿದ್ದು ಸುಳ್ಳಲ್ಲ|| ದುಡಿಲಾರ್ದ ಕುಂತು ತಿಂದ್ರ ಕಡುಕಿ ಹೊನ್ನು ಸಾಲಲ್ಲ. |ಜಕ್ ನಕ ನಕ ಜಕ(೩) ಜಕ್ ನಕ ನ|  ತ್ರಿನೇತ್ರಜ್  ಶಿವಕುಮಾರ .ಹಿರೇಮಠ.

ಬಿಡಂಗಿಲ್ಲ ನಿನ್ನ

 ಜಾನಪದ ಶೈಲಿ ಗೀತೆ.         ಬಿಡಂಗಿಲ್ಲ ನಿನ್ನ ಕ್ವಾರಿಮೀಸಿನ ಸವರಕೋಂತ. ಕಾಯ್ತಿದ್ದ್ಯಾ ಗುಡಿಹತ್ರಕುಂತ. ಬಂದಿ ನೋಡ ಬಿಂದಿಗಿ ಹೊತ್ತ. ವಾರಿನೋಟ ಬೀರಿ ಅತ್ತ ಇತ್ತ. ನಿನ್ನ ಕಂಡರ ನನಗೇನೋ ಸುಗ್ಗಿ. ಕುಣಿತೈತಿ ನೋಡ ಮನಸು ಹಿಗ್ಗಿ. ನೋಡತಿದ್ದರ ನೀ ಬಗ್ಗಿ ಬಗ್ಗಿ ಕುದ್ದಂಗಾತು ಎದೆಯಾಗ ಹುಗ್ಗಿ. ಒಪ್ಪಸ್ತೇನ ನಿಮ್ಮ ಮನಿಗೆ ಬಂದ ಇಡತೇವಿ ಹಣ್ಣ ನಿಮ್ಮಪ್ಪನ ಮುಂದ. ಸುತ್ತ  ಹತ್ಹಳ್ಳಿಗೆ ನೀನೊಬ್ಳ ಚಂದ. ಆಗುದಿಲ್ಲ ಬಿಟ್ಟಿರಾಕ ನನಗಿನ್ಮುಂದ. ತ್ರಿನೇತ್ರಜ ಶಿವಕುಮಾರ .ಹಿರೇಮಠ.

*ಜೀವನ ಜೀವ*

ಭಾವಗೀತೆ *ಜೀವನ ಜೀವ*  ಸಿರಿತನದ ಚಿಂತೆಯಿಲ್ಲ ಜೊತೆಗಿರಲು ನೀ ಪ್ರಿಯೆ. ಬಡತನವೆ ಬೇವು ಬೆಲ್ಲ ದಿನದಿನವು ಯುಗಾದಿಯೆ.|ಪ| ನಿನ್ನ ಹೃದಯವೆ ಎನಗೈಸಿರಿಯು. ಒಲವು ಬತ್ತದ ಜೀವ ನದಿಯು. ಸದ್ಗುಣಗಳೆ ನಿನ್ನಯ ಒಡವೆ. ತೋಳಲಪ್ಪಿ ನಾ ಕಾಪಾಡುವೆ.|೧| ಉಂಡುಡಲಿಹುದು ಮೂರ್ಹೊತ್ತು. ಹೊಕ್ಕಳ ಕುಡಿಗಳೆ ಸಂಪತ್ತು. ಪ್ರೀತಿಯೆ ಬದುಕಿನ ಗಮ್ಮತ್ತು. ತಡೆಯಾಗದು ವಯ ಯಾವತ್ತೂ. |೨| ನೀನೆ ನನ್ನಯ ಜೀವನ ಜೀವ. ಸಮಹೊತ್ತಿರುವೆ ನಲಿವು ನೋವ. ನೂರು ಜನ್ಮಕು ನೀಡಿ ಮನವ ಎದೆಯಲಿ ಬಚ್ಚಿಡು ಗೆಲ್ಲುವೆ ಸಾವ.  |೩| ತ್ರಿನೇತ್ರಜ ಶಿವಕುಮಾರ. ಹಿರೇಮಠ.

*ಮುಸ್ಸಂಜೆಯಾದಾಗ*

   *ಮುಸ್ಸಂಜೆಯಾದಾಗ* ಮರಳಿದವು ಬಾನಾಡಿಗಳು ಮರಳಿದವದೋ ಗೋವುಗಳು ಮುಳುಗುತಿಹನು ರವಿ ಕೂಡ ಮುಸ್ಸಂಜೆಯಾಯಿತು ನೋಡ|ಪ| ಬಾನಗನ್ನಡಿಯಲಿ ಸಂಧ್ಯಾ ಸಿಂಗಾರವ ತೋರಿದಳು. ಇನಿಯ ಬಂದೊಡನೆ ನಸು ನಾಚುತ್ತ ಕೆಂಪಾಗಿಹಳು.|೧| ಬೆಳ್ಳಿ ಬಿಂದಿಯನು ಹಣೆಗೆ ಬೊಟ್ಟಂತೆ ಇಟ್ಟು ನಿಂತಳು ಹೊಳೆವ ಮೊಗ್ಗುಗಳ ತನ್ನ ಮುಡಿಗೇರಿಸಿ ನಸುನಕ್ಕಳು|೨| ಇರುಳ ಹೆರಳನು ಹರಡುತ್ತ ಇಳೆಯ ಕಳೆಯ ಕದ್ದಿಹಳು. ಕಡುಗಪ್ಪನೆ ಸೆರಗ ಬೀಸುತ್ತ ತೋರ್ಬೆರಳ ತೋರಿಹಳು.|೩| ✍🏼 ತ್ರಿನೇತ್ರಜ  ಶಿವಕುಮಾರ. ಹಿರೇಮಠ.

*ಏಕಾಂಗಿನಿ*

              *ಏಕಾಂಗಿನಿ*  ದೂರತೀರವು ಆಸೆ ತೋರುತ ದಿನವೂ ನನ್ನ ಸೆಳೆದಿದೆ. ನೀರ ತೊರೆದು ಬಾನಿನೊಡನೆ ಬೆರೆತ ಹಾಗೆ ತೋರಿದೆ. ಬಂಧನದ ಬದುಕೇಕೊ ಉಸಿರ ಕಿತ್ತುಕೊಳುತಿದೆ. ಬತ್ತುತಿರುವ ಲಜ್ಜೆಯೇಕೊ ದೂರದೂರ ಬಯಸಿದೆ. ನಿಂತ ನೀರು ಈಜಲೆನಗೆ ಒತ್ತಾಸೆಯ ತುಂಬಿದೆ. ಕಂಬಿಕಿತ್ತ ಕಿಟಕಿಯೊಂದು ಪರದೆ ಸರಿಸಿ ಕರೆದಿದೆ. ವಿರಹದಿರಿತ ಸಹಿಸಲೆಂತು ಮನಕೆ ತಿಳಿಯದಾಗಿದೆ. ಹೃದಯಾಳದ ಸುಪ್ತ ಪ್ರಜ್ಞೆ ದುಡುಕದಂತೆ ತಡೆದಿದೆ. ✍🏼 ತ್ರಿನೇತ್ರಜ  ಶಿವಕುಮಾರ. ಹಿರೇಮಠ.

*ಸಂಭವ*

ಭಾವಗೀತೆ           *ಸಂಭವ*   ಆಸೆಬೆನ್ನ ಬಿದ್ದರೆಂತು ತೃಪ್ತಿ ಸಿಗುವುದು. ಮೋಸವಿಲ್ಲದ ಪ್ರೀತಿ ಹರುಷ ತರುವುದು. ಬೇಡವೊ ದುರಾಸೆ ಬಾರದುದನು ಆಶಿಸೆ ನೋಯುವೆ ಮನಸೆ ಬಾಡುವ ಮೈ ಬಣ್ಣಕೆ ಮನ ಬಾಗುವುದೇಕೋ. ಬತ್ತದಿರೊ ಮನದ ಗುಣವ ಮರೆಯುವುದೇತಕೋ. ಹರುಷ ಹುಡುಕಿ ದುಡುಕಿ ನೋವ ಪಡೆವುದೇತಕೋ. ಚಿಂತೆ ಎಂಬ ಚಿತೆಯನೇರಿ ಮಡಿಯುವುದೇತಕೋ. ಮನಸುಗಳು ಬೆರೆಯದಿರೆ ಸರಸವು ಬರದು. ಇಲ್ಲದುದನು ನೆನೆಯುತಿರೆ ಹರುಷವೆ ಇರದು. ನಾಳೆ ಅರಿಯದೆ ನೂರು ಬಯಕೆ ಕೂಡದು. ಮಿತವೆ ಹಿತವು ಆದರೇನೆ ಸುಖವು ದೊರೆವುದು. ✍🏼  ತ್ರಿನೇತ್ರಜ್  ಶಿವಕುಮಾರ ಹಿರೇಮಠ ೯೯೪೫೯೧೫೭೮೦

ಶಿವಪಾರ್ವತಿಯರ ಶೃಂಗಾರ

ಭಾವಗೀತೆ     ಶಿವಪಾರ್ವತಿಯರ ಶೃಂಗಾರ ಶಂಕರ ಶಿವೆಯರ ಶೃಂಗಾರ ಕಾವ್ಯ. ಜಗಕೆಲ್ಲ ಸಾರಿತು ಪ್ರೇಮ ಭವ್ಯ. ಕಲ್ಪಿಸೊ ಕಂಗಳಿಗೆ ರಸವಿದು ದಿವ್ಯ. ಕೈಲಾಸವಾಯಿತು ಪರಮ ನವ್ಯ. ಪಂದ್ಯದಿ ಸೋತನು ಪರಮಶಿವ. ಚಂದ್ರನೆಡೆ ಚಾಚೆ ಉಮೆ ಕರವ. ಕೋಮಲಾಂಗಿ ಕುಚತಾಗಿ ಕನಲಿದನು ಶಶಿಧರ. ನಡುಬಳಸಿ ಚುಂಬಿಸಿದ ಅರ್ಧಾಂಗಿಯ ಅಧರ. ಉನ್ಮಾದತಂತು ಪ್ರಣಯ ಲೀಲೆ. ರೋಮಾಂಚನವೀವ ಸೃಷ್ಟಿ ಕಲೆ. ಬಿಸಿಯುಸಿರಿಗೆ ಕರಗಿತು ಶಿಖರದ ಹಿಮಮಾಲೆ. ತ್ರಿಲೋಕವೆ ಆಡಿಹುದು ಲಾಸ್ಯಮಯ ಉಯ್ಯಾಲೆ. ✍🏼 ತ್ರಿನೇತ್ರಜ ಶಿವಕುಮಾರ. ಹಿರೇಮಠ. ಶಿವ-ಪಾರ್ವತಿಯರ ಶೃಂಗಾರ [13/02, 9:55 p.m.] ಶಂಕರ ಶಿವೆಯರ ಶೃಂಗಾರ ಕಾವ್ಯ. ಜಗಕೆಲ್ಲ ಸಾರಿತು ಪ್ರೇಮ ಭವ್ಯ. ನೀಲಕಂಠ ಹರಿಸಿದ ಪ್ರೇಮಸೆಲೆ ಎದೆಗೊರಗಿ ಪರವಶದಿ ಕರಗಿದಳು ಕೋಮಲೆ ಬಿಸಿಯುಸಿರಿಗೆ ಕರಗಿತು ಶಿಖರದ ಹಿಮಮಾಲೆ. ತ್ರಿಲೋಕವೆ ಆಡಿಹುದು ಲಾಸ್ಯಮಯ ಉಯ್ಯಾಲೆ. ಉನ್ಮಾದತಂತು ಸತಿ ಪತಿ ಪ್ರಣಯ ಲೀಲೆ. ರೋಮಾಂಚ ನೀಡುವ ಸೃಷ್ಟಿಯ ಕಲೆ. ಕಲ್ಪಿಸೊ ಕಂಗಳಿಗೆ ರಸವಿದು ದಿವ್ಯ. ಕೈಲಾಸವಾಯಿತು ಪರಮ ನವ್ಯ. ✍🏼 ತ್ರಿನೇತ್ರಜ ಶಿವಕುಮಾರ. ಹಿರೇಮಠ.

*ಸವಿನೆನಪ ಸವಿ*

 ಭಾವಗೀತೆ   *ಸವಿನೆನಪ ಸವಿ*  ಸಂಧ್ಯೆ ಮೂಡಿಬಂದಾಗ ಪಾರಿಜಾತವರಳಿತು. ಸೌಗಂಧಚೆಲ್ಲುತ ನಿನ್ನ ನೆನಪನ್ನು ತಂದಿತು.|ಪ| ಕೆಂದುಟಿಯ ರಂಗು ನೆನೆದು ಹೃದಯ ಬಿಸಿಯಾಯಿತು. ಆ ನೀಲಿ ಕಣ್ಣುಲಿ ಹೇಗೋ ಮನ ಕಳೆದು ಹೋಯಿತು.|೧| ಬಾಹುಬಂಧನಕೆ ತೋಳು ಪರಿತಪಿಸಿ ಚಾಚಿವೆ. ಬೆಳದಿಂಗಳ ತಂಪು ಏಕೋ ಎದೆಯ ಬಿಸಿಗೆ ಕಾರಣವೆ!|೨| ಸೆರಗ ಹಾಸಿ ಸಮ್ಮೊಹನದಿ ನಿಶೆಯು ನಶೆಯ ತಂದಿತು. ಸಂಗಾತಿ ನಿನ್ನಯ ನೆನಪು ಮನದ ತುಂಬಾ ತುಂಬಿತು.|೩| ✍🏼 ತ್ರಿನೇತ್ರಜ ಶಿವಕುಮಾರ. ಹಿರೇಮಠ. 9945915780 shivakumarh13 @gmail.com

ಒಲವಿನೊಡತಿಗೆ

ಭಾವಗೀತೆ       *ಒಲವಿನೊಡತಿಗೆ*  ಎದೆಯಲ್ಲಿ ಎನೋ ಭಾವ ಮಿಂಚು ಸುಳಿವ ರೀತಿ. ಚಂದಿರನ ಚಂದ್ರಿಕೆಯಂತೆ ನೀ ತಂದ ಪ್ರೀತಿ.|ಪ| ಒಂಟಿ ಹಕ್ಕಿ ಹಾಡುತಿತ್ತು ಹುಡುಕುತ ಸರಿಜೋಡಿ ನೀಬಂದು ಜೊತೆಯಾದೆ ಪ್ರೇಮಗೀತೆ ಹಾಡಿ.|೧| ನೀನಿತ್ತ ಮೊದಲ ಮುತ್ತು ಮನಕೆ ಮತ್ತ ತುಂಬಿತು. ಒಲವ ಸೆಲೆ ಉಕ್ಕಿ ಹರಿದು ಎದೆಗೆ ತಂಪು ನೀಡಿತು.|೨| ಮರೆತು ಸಹ ಮರೆಯಲಾರೆ ನಿಷ್ಕಲ್ಮಷ ಪ್ರೇಮವನು. ಉಸಿರಿರುವತನಕ ಉಸಿರ ನಿನ್ನೆದೆಗೆ ತುಂಬುವೆನು.|೩| ✍🏼 ತ್ರಿನೇತ್ರಜ ಶಿವಕುಮಾರ.ಹಿರೇಮಠ. 9945915780 shivakumarh13 @ gmail.com

ಕನ್ನಡವೆಮ್ಮಯ ನುಡಿಸಿರಿ

 ಭಾವಗೀತೆ ಕನ್ನಡವೆಮ್ಮಯ ನುಡಿಸಿರಿ  ‌       ಕನ್ನಡವೆಮ್ಮುಯ ನುಡಿಸಿರಿ ಕರುನಾಡೆ ನಮ್ಮ ಐಸಿರಿ|ಪ| ಮಲೆನಾಡಿನ ಮಧುರ ಕನ್ನಡ ಮಂಜುಳ ಗಾನದಂತೆ. ಬಯಲುಸೀವೆಯ ಗಟ್ಟಿ ಕನ್ನಡ ಫಿರಂಗಿ ಗುಂಡಿನಂತೆ. ಮೈಸೂರಿನ ಮುದ್ದು ಕನ್ನಡ ಮಲ್ಲಿಗೆಯು ಅರಳಿದಂತೆ. ಗಡಿನಾಡಿನಲಿ ಉಲಿವ ಕನ್ನಡ ಜೇನ್ ಬೆರೆತ ಹಾಲಿನಂತೆ...|೧| ರನ್ನ,ಪೊನ್ನರ,ಪಂಪ ಜನ್ನರ ಜೀವವಾಣಿ ಈ ನುಡಿಯು. ಕುಮಾರವ್ಯಾಸರು ರಾಘವಾಂಕರು ಹಾಡಿಹ ರಸಝರಿಯು. ಶರಣರ ವಚನ ದಾಸರ ಪದಗಳ, ಜನಪದ ಸಾಹಿತ್ಯದ ಬೀಡು ಅಷ್ಟ ಜ್ಞಾನಪೀಠ ಗೌರವ ಪಡೆದಿಹ ಭುವನೇಶ್ವರಿಯ  ಹೊನ್ನಾಡು.|೨| ✍🏼 _ತ್ರಿನೇತ್ರಜ_ ಶಿವಕುಮಾರ.ಹಿರೇಮಠ. 9945915780 shivakumarh13@gmail. com

ಮೂಡಣ ಬೆಡಗು

ಭಾವಗೀತೆ ೫.೩.೫.೩. ೫.೩.೩ ಮಾತ್ರಾಗಣದಲ್ಲಿ  * ಮೂಡಣ ಬೆಡಗು * ಬಂಗಾರ ತೇರ ಮೇಲೇರೆ ಸೂರ್ಯ ಹೊಂಬೆಳಕು ಹರಡಿ ಬಂತು; ಭೂರಮೆಗೆ ತನ್ನ ಬೆಳಕಿತ್ತ ರನ್ನ ಮುಂಜಾವು ರಂಗು ತಂತು. ಇರುಳನ್ನು ದಬ್ಬಿ ಇಬ್ಬನಿಯ ತಬ್ಬಿ ಮುದದಿಂದ ಮುತ್ತ ಇತ್ತು; ಕದಡುತಲಿ ಮೌನ ಪಕ್ಷಿಕುಲ ಗಾನ ಮೂಡಣದಿ ಪರದೆ ಬಿತ್ತು. ಇರುಳೆಲ್ಲ ಮುಲುಗಿ ನಲುಗಿರಲು ಅಲುಗಿ ಸಂತೃಪ್ತಿ ತಂತು ಮಿಲನ. ಉರುಳೈತೆ ನಿಶೆಯು ಮೂಡೈತೆ ಉಷೆಯು ಹುಟ್ಟೈತೆ ದಿನನವೀನ ನವದಿನವು ಮೂಡಿ ಹೊಸ ರಾಗ ಹಾಡಿ ಹಕ್ಕಿಗಳು ರೆಕ್ಕೆ ಬೀಸಿ; ಹೊಸ ಭಾವ ಹೊಮ್ಮಿ ಬಾನೆಡೆಗೆ ಚಿಮ್ಮಿ ಹಾರಿಹವು ಬದುಕನರಸಿ. ✍🏼 _ತ್ರಿನೇತ್ರಜ_ ಶಿವಕುಮಾರ.ಹಿರೇಮಠ. 9945915780 shivakumarh13@gmail. com ****************************** ########################### ಭಾವಗೀತೆ ಸ್ಪರ್ಧೆಗೆ ೫.೩.೫.೩. ೫.೩.೩ ಮಾತ್ರಾಗಣದಲ್ಲಿ  *ಮೂಡಣ ಬೆಡಗು* ಬಂಗಾರ ತೇರ ಮೇಲೇರಿ ಸೂರ್ಯ ಹೊಂಬೆಳಕ ಹರಡಿ ನಿಂತು; ಭೂರಮೆಗೆ ತನ್ನ ಬೆಳಕಿತ್ತ ರನ್ನ ಮುಂಜಾವ ರಂಗು ಬಂತು. ಇರುಳನ್ನು ದಬ್ಬಿ ಇಬ್ಬನಿಯ ತಬ್ಬಿ ಮುದದಿಂದ ಮುತ್ತ ಇತ್ತು; ಮರೆಯಾಗಿ ಮೌನ ಹೊಸತೊಂದು ಧ್ಯಾನ ಮೂಡಣದಿ ಪರದೆ ಬಿತ್ತು. ಸ್ಪರ್ಷಕ್ಕೆ ಮುಲಗಿ ನಲುಗಿರಲು ಅಲುಗಿ ಸಂತೃಪ್ತಿ ತಂತು ಮಿಲನ. ಉರುಳಿರಲು ನಿಶೆಯು ಮೂಡಿರಲು ಉಷೆಯು ಮತ್ತೊಂದು ದಿನದ ಜನನ. ನವದಿನವು ಮೂಡಿ ಹೊಸರಾಗ ಹಾಡಿ ಹಕ್ಕ...

*ಸೃಷ್ಟಿ ಲೀಲೆ*

( ಮಲ್ಲಿಕಾಮಾಲೆ ಛಂದಸ್ಸಿನಲ್ಲಿ.   3 4 3 4 3 4 4 )  * ಸೃಷ್ಟಿ ಲೀಲೆ * ಎನಿತು ಚೆಲುವಿದು ನನ್ನ ಸೆಳೆಯಿತು ತುಂಬಿ ತನುಮನ ತನನನ. ದೇವ ರಚಿಸಿದ ಕಾವ್ಯ ಸೃಷ್ಟಿಯು ಹೊಸತು ಕಣ್ಣಿಗೆ ಅನುದಿನ..||ಪ|| ಮಾರ ಎಸೆದಿಹ ಮೋಹ ಬಾಣವ ಹಾಡಿ ಒಲವಿನ ಗಾಯನ. ಇಳೆಗೆ ಹರೆಯದ ಕಳೆಯು ಮೂಡಲು ಮತ್ತೆ ಪುಟಿದಿದೆ ಯೌವ್ವನ. ...||೧|| ಬುವಿಯ ದಾಹಕೆ ಸುರಿಯೆ ಮಳೆಯದು ಪಚ್ಚೆ ಹಾಸಿನ ಪರಿಸರ. ರೈತ ಬಿತ್ತಿದ ಬೀಜ ಮೊಳೆಯಲು ಹೊಲವು ಹಸಿರಿನ ಸಾಗರ....||೨|| ನಾನು ನಿನ್ನೊಳು ನೀನು ನನ್ನೊಳು ಬೆರೆಯೆ ಬದುಕಿದು ಪಾವನ. ಆನು ನಿನ್ನೊಳು ಮೂಡಿ ನಿಲ್ಲಲು ಬಾಳು ಸುಂದರ ಹೂಬನ.||೩|| --- --- --- --- --- --- --- ✍🏼 ತ್ರಿನೇತ್ರಜ.

ಅವ್ವಗೆ ನಮನ

 *ಅವ್ವಗೆ ನಮನ*  ಅವ್ವ ಎಂಬ ಪದವೇ ಜೀವ ನೀಗಿಸುವುದು ಮನದ ನೋವ.|ಪ| ಮೊದಲುಸಿರಿಗೆ ಬಂದ ಪದ. ತೆರೆಯುವುದು ಆಗ ಜಗದ ಕದ. ಅವ್ವ ಎಂದರೆ ಬಾಳಿನ ಉಸಿರು. ಸೃಷ್ಟಿಯ ಮೂಲವೆ ತಾಯಿಯ ಬಸಿರು.||೧|| ನೋವುಂಡು ಜನ್ಮ ಕೊಡುವ ಎದಗಪ್ಪಿ ಹಾಲು ಉಣಿಸುವ ಲೋಕದ ಏಕೈಕ ವಾತ್ಸಲ್ಯ ಶರಧಿ, ಉಸಿರಿರುವವರೆಗೆ ನಾ ನಮಿಸುವೆ ಮನದಿ||೨|| .... ..... .... .... ..... .... .. ..✍🏼 ತ್ರಿನೇತ್ರಜ. ಶಿವಕುಮಾರ. ಹಿರೇಮಠ.

ಕಾಯಿಸದಿರು ಹೀಗೆ

ಭಾವಗೀತೆ              * ಕಾಯಿಸದಿರು ಹೀಗೆ*        ಹೂವಿನ ನಗೆಯವಳೆ ನನ್ನೆದೆಯ ಹೊಂಬಾಳೆ ಸಂಜೆಯಾಯ್ತು ಬೇಗ ಬಾರೆ, ವಿರಹವೇದನೆಯ ನಾ ತಾಳೆ. ನಿನ್ನಲ್ಲಿ ಏನೋ ಸೆಳೆತ ಬೇರೆಲ್ಲಿಯು ನಾ ಕಾಣೆ. ಧಮನಿಯಲಿ ತುಂಬಿರವೆ ಬಿಟ್ಟಿರೆನು ಆ ದೇವರಾಣೆ. ಕೆಂಗುಲಾಬಿ ಕಾತರಿಸುತಿವೆ ನಿನ್ನಂದವ ನೋಡಲು. ಸುಗಂಧವದು ಹುಡುಕುತಿದೆ ನನ್ನಂತೆಯೆ ನಿನ್ನ ಮೈ ಸೋಕಲು. ಕ್ಷಣ ಕ್ಷಣವೂ ಯಗವಾಗಿ ಉಸಿರಿದು ಭಾರವಾಗಿದೆ. ಶಂಕೆಇಲ್ಲ ನಿನ್ನ ಪ್ರೇಮಕೆ ಭರವಸೆಯು ನನಗಿದೆ. ಅದೆಂತದೋ ತಳಮಳ ಮನದ ಕೊಳವ ಕದಡಿದೆ. ಕಂಗಳಲಿ ಆತಂಕ ತೂರಿ ಚಿಂತೆಏಕೋ ಕಾಡುತಿದೆ.  *✍🏼 ತ್ರಿನೇತ್ರಜ.* ********************** ################# ಭಾವಗೀತೆ                * ಕಾಯಿಸದಿರು ಹೀಗೆ*        ಹೂವಿನ ನಗೆಯವಳೆ ನನ್ನೆದೆಯ ಹೊಂಬಾಳೆ ಸಂಜೆಯಾಯ್ತು ಬಾರೆ, ವೇದನೆಯ ನಾ ತಾಳೆ. ಕೆಂಗುಲಾಬಿ ಕಾತರಿಸಿವೆ ನಿನ್ನಂದವ ನೋಡಲು. ಸುಗಂಧವದು ಹುಡುಕುತಿದೆ ನಿನ್ನ ಮೈಯ‌ನು ಸೋಕಲು. ನಿನ್ನಲ್ಲಿಹ ಏನೋ ಸೆಳೆತ ಸಾಕು ಜಗವ ಮರೆಯಲು. ಕ್ಷಣ ಕ್ಷಣವೂ ಯುಗವಾಗಿ ಉಸಿರು ಭಾರವಾಗಿದೆ. ಶಂಕೆಇಲ್ಲ ನಿನ್ನ ಪ್ರೇಮಕೆ ಭರವಸೆಯು ನನಗಿದೆ. ಅದೆಂತದೋ ತಳಮಳ ಮನದ ಕೊಳವ ಕದಡಿದೆ. ...

ಸ್ನೇಹ ಬಂಧನ

ಭಾವಗೀತೆ       *ಸ್ನೇಹ ಬಂಧನ*  ಜೀವ ಜೀವವ ಬೆರೆಸಿ ಬೆಸೆಯುವ ಸ್ನೇಹ ಅಮರ ಸ್ಪಂದನ. ಮಿಡಿತ ತುಡಿತದ ಮಧುರಭಾವ ಅದುವೆ ಸ್ನೇಹ ಬಂಧನ. ಕೋಗಿಲೆಗೂ ಮಾಮರಕೂ ಅವಿನಾಭಾವ ಸಮ್ಮಿಲನ. ನದಿಗೂ ಕಡಲಿಗೂ ಅದೆಂದೋ ಆಗಿದೆ ಬಿಡಿಸಲಾರದ ಗೆಳೆತನ. ಆಸ್ತಿ-ಜಾತಿ, ಕೀರ್ತಿ-ಪ್ರೀತಿ ಮೀರಿಹ ಕಂಪಿನ ಚಂದನ.•••೧ ||ಅದುವೆ ಸ್ನೇಹ ಬಂಧನ.|| ಸ್ವಾರ್ಥವೆಂದೂ ಮೂಡಲಾರದು ಭದ್ರ ಸ್ಹೇಹದ ಕೋಟೆಯೊಳು. ಅಕಳಂಕಿತ ಬಾಳದೋಣಿಯು ಮುಳುಗದು ಸ್ನೇಹದ ಕಡಲೊಳು. ಲೋಕದ ನೀತಿ, ಪ್ರಾಣಭೀತಿಯ ತೊಡೆದಿಹ ಭವ ಸಂಕಲನ•••೨ ||ಅದುವೆ ಸ್ನೇಹ ಬಂಧನ|| ~~~~~~~~~~~~~~~~ ✍🏼 ತ್ರಿನೇತ್ರಜ.

*ದಿವ್ಯಾಂಗರ ಮನದಿಂದ*

 *ದಿವ್ಯಾಂಗರ ಮನದಿಂದ* .... .... .... .... ..... ..... .... ಮನನೊಂದು ಹಾಡಿಹೆವು ಈ . ಕೇಳುವಿರಿ ನೀವೆಂದು ಭಾವಿಸಿಹೆವು.|ಪ| ಕಣ್ಣಿಲ್ಲ ,ಕಿವಿ ಇಲ್ಲ ,ಕೈಯಿಲ್ಲ, ಕಾಲಿಲ್ಲ; ಎಂಬ ನೋವು ಎಮಗೆ ಎನಿತು ಇಲ್ಲ. ಸೃಷ್ಟಿಕರ್ತನ ಬಯಕೆ, ಇಷ್ಟೇ ಸಾಕೆಮಗೆ.|೧| ಬೇಸರವಿದೆ ಮನಕೆ ನಿಮ್ಮ ನೋಟಗಳಿಂದ, ನೋವಾಗುವುದೆಮಗೆ ಕುಹಕ ನುಡಿಯಿಂದ. ಬೇಡೆಮಗೆ ಅನುಕಂಪ, ಮನವಿ ಇದು ನಮ್ಮಿಂದ; ಅವಕಾಶಗಳ ನಮಗೆ ಕೊಟ್ಟು ನೋಡಿ. ಸಾಧಿಸುವೆವು ನಿಮ್ಮಂತೆ ಕಾರ್ಯ ಮಾಡಿ.|೨| .... ... ... .... .... ... ..... ..✍🏼 ತ್ರಿನೇತ್ರಜ. ಶಿವಕುಮಾರ. ಹಿರೇಮಠ. ***************************** ########################## ಶೀರ್ಷಿಕೆ : *ದಿವ್ಯಾಂಗರು ದೇವರ ಮಕ್ಕಳು* ಕವಿ: ತ್ರಿನೇತ್ರಜ. (ಶಿವಕುಮಾರ. ಹಿರೇಮಠ) ಪ್ರಕಾರ: ಭಾವಗೀತೆ. ಭಾಷೆ: ಕನ್ನಡ. .... .... .... .... ..... ..... .... ಮನನೊಂದು ಹಾಡಿದೆನು ಈ ಹಾಡನು. ಕೇಳುವಿರಿ ನೀವೆಂದು ಭಾವಿಸುವೆನು. ||ಮನನೊಂದು|| ಕಣ್ಣಿಲ್ಲ ,ಕಿವಿಯಿಲ್ಲ ,ಕೈಯಿಲ್ಲ, ಕಾಲಿಲ್ಲ; ಎಂಬ ನೋವು ದೇವರ ಮಕ್ಕಳಿಗಿಲ್ಲ--(೨) ಸೃಷ್ಟಿಕರ್ತನ ಬಯಕೆ,ಸ್ವೀಕರಿಸಿಹರೆಲ್ಲ.    ||ಮನನೊಂದು|| ಬೇಸರವಿದೆ ಮನಕೆ ನಿಮ್ಮ ನೋಟಗಳಿಂದ, ನೋವಾಗುವುದು ಎದೆಗೆ ಕುಹಕ ನುಡಿಯಿಂದ--(೨) ಬೇಡ ನಿಮ್ಮ ಅನುಕಂಪ, ಮನವಿ ಇದು ನನ್ನಿಂದ; ಅವಕಾಶಗಳನ್ನವರಿಗೆ...

ದೇಶಭಕ್ತಿ ಗೀತೆ

ದೇಶಭಕ್ತಿ ಗೀತೆ ವಂದಿಸುವೆ ಭಾರತಾಂಬೆಗೆ ------------------- ವಂದಿಸುವೆ ಭಾರತಾಂಬೆಗೆ ಶಾಂತಶೀಲ ಪ್ರತಿರೂಪಿಣಿಗೆ ಘಟ್ಟಗಳ ಕೈಚಾಚಿಹ ನದಿನಾಡಿಗಳ ಹರಿಸಿಹ ಬಹುಭಾಷಾ ಹೂಗಳಿಂದ ಕುವರಿಯರ ಸಿಂಗರಿಸಿಹ ಹಸಿರನುಟ್ಟ ಹರಿದ್ವರ್ಣಿಗೆ ಉಪಖಂಡ ನಾಮಾಂಕಿತೆಗೆ.|ಪ| ಹಿಮಾಲಯವೆ ನಿನ್ನ ಹೆಳಲು ಬೈತಲೆ ಆ ಕಣಿವೆಗಳು ಅಲೆಯ ಸೇವೆ ನೀಡುತಿಹವು ಸಾಗರ, ದ್ವಿಜಲಧಿಗಳು ಕಲೆಸಿರಿಯೆ ನಿನ್ನಾಭರಣ ಕವಿಕಾವ್ಯವೆ ಮಂಜುಳಗಾನ|೧| ಬೇಡಿ ಬಂದ ಮನುಜರಿಗೆ ನೆಲೆಯಿಟ್ಟು ಪೊರೆದಾಕೆ ನಿನ್ನ ಮೌಲ್ಯ ಅರಿತವರಿಗೆ ಜ್ಞಾನ ಧಾರೆ ಎರೆದಾಕೆ ಶೂನ್ಯವೆ ಪರಿಪೂರ್ಣವೆಂದು ಜಗದಗಲಕೂ ತೋರಿದಾಕೆ.|೨| ..... ..... ..... ..... .... ✍..ತ್ರಿನೇತ್ರಜ್ ಶಿವಕುಮಾರ. ಹಿರೇಮಠ.

*ಬನ್ನಿರೆಲ್ಲ ಶಾಲೆಗೆ*

*ಬನ್ನಿರೆಲ್ಲ ಶಾಲೆಗೆ*  ಬನ್ನಿರಿ ಬನ್ನಿರಿ ಶಾಲೆಯ ಕಡೆಗೆ ಸಾಗೋಣ ಒಟ್ಟಾಗಿ ಬೆಳಕಿನ ಕಡೆಗೆ.|ಪ| ವಿದ್ಯೆಯಿಲ್ಲದ ಬಾಳು  ಹದ್ದಿಗಿಂತಕಡೆ. ಕಲಿಯೋಣ ಅಕ್ಷರವ ಶಾಲೆಯೆಡೆಗೆ ನಡೆ. ಸಾಕಿನ್ನು ಮೋಸಹೋಗೊ ದಡ್ಡತನದ ಬಾಳು. ಜ್ಞಾನವಂತರಾದರೆ ಇರದು ಇಂಥ ಗೋಳು.|೧| ಶಾಲೆಯಿದು ಸರ್ವಧರ್ಮ ದೇವಾಲಯವಣ್ಣ ಶ್ರದ್ಧೆಯಿಂದ ವಿದ್ಯೆಯ ಕೃಪೆ ಪಡೆಯೋಣವಣ್ಣ ನಲಿಯೋಣ ಕಲಿಯೋಣ ಎಲ್ಲ ಬನ್ನಿರಿಲ್ಲಿ ಸುಶಿಕ್ಷಿತರಾದರೆ ಕಷ್ಟಗಳಿನ್ನೆಲ್ಲಿ.|೨| ✍🏼 _ತ್ರಿನೇತ್ರಜ_ ಶಿವಕುಮಾರ.ಹಿರೇಮಠ. 9945915780 ಸಹ ಶಿಕ್ಷಕರು

ಲಾಲಿ ಹಾಡು

ಲಾಲಿ ಹಾಡು ನಯವಾಗಿ ಕಣ್ಸೇರಲು ನಿದಿರಾದೇವಿ ಬಂದಿಹಳು| ಹೊಂಗನಸ ತೋರಿಸಲು ನಿನ್ನ ಕರೆದೊಯ್ಯುವಳು| ಮಲಗೆನ್ನ ಮಗುವೆ, ನಾ ಲಾಲಿ ಹಾಡುವೆ. ಲಾಲಿ ಜೊ ಜೊ ಲಾಲಿ||ಪ|| ಗೆಜ್ಜೆಕಾಲು ಕುಣಿಕುಣಿದು ಸುಸ್ತಾಗಿವೆ. ನೋಟವಾಡಿ ನಯನಗಳು ದಣಿದಿವೆ. ಅಮೃತವ ಹೀರಿದ ಅಧರಗಳು ಮೌನಕೆ ಶರಣಾಗ ಬಯಸಿವೆ. ಮಲಗೆನ್ನ ಸಿರಿಯೆ, ತಾರೆಗಳ ದೊರೆಯೆ||೧|| ಪರಿಪೂರ್ಣ ಜೀವನ ನಾಕಂಡೆ. ತಾಯ್ತನದ ಸುಖವ ನಾನುಂಡೆ. ನಿನ್ನ ಮುಗುಳು ಹೂನಗೆಯೊಂದೆ ಹಿಗ್ಗಿನ ಹೊನಲೆಂದು ಮನಗಂಡೆ. ತೆಕ್ಕೆಯೊಳು ಹಾಯಾಗಿರು ಒಲವಿನ ಗಿಣಿಯೆ||೨|| ನಿನ್ನಿಂದ ಈ ಮನೆ ಸಗ್ಗಾಯಿತು, ಹಿಗ್ಗಿನ ಹೊನಲು ಹರಿದಾಡಿತು. ಮನೆಯ ಕೀರ್ತಿ ಕಲಶ ನೀನಾಗಿ ಕೀರ್ತಿವಂತನಾಗು ಮಾಡಿ ಒಳಿತು. ಮನೆಗೆ ನಂದಾದೀಪ ನಿನ್ನೀ ಮುದ್ದು ರೂಪ||೩|| .... ..... .... .... .... ... .... ..✍ತ್ರಿನೇತ್ರಜ.

ಅಪ್ಸರೆ

ಭಾವಗೀತೆ -----------     *ಅಪ್ಸರೆ* ನಾ ಕಂಡ ಚೆಲುವೆಯರಲ್ಲಿ ನೀನೋರ್ವಳೆ ಅಪ್ಸರೆ. ಎನ್ನ ಹೃದಯ ಬೆಳಗುವುದು ನೀ ಬಳಿ ಬಂದರೆ. ಅಪ್ಸರೆ... ಪ್ರೇಮ ಧಾರೆ.. ಆ ನಿನ್ನ ಸುಂದರ ಕಣ್ಣಿನ ಹಣತೆಯೊಳು ಬಿಂಬತೈಲ ನಾನಾಗಿ ನೆಲೆಸುವ ಆಸೆ, ನೋಟದ ಕುಡಿಯಿಂದ ಒಲವದೀಪ ಹೊತ್ತಿಸಿ ನಿಸ್ಸಂಕೋಚದಿ ತೋರು ನಿನ್ನಾಸೆ. ಭಾವಶೃಂಗದ ಉತ್ತುಂಗವ ಏರಿ ನಿಲ್ಲುವ ಆಸೆ. ಅಪ್ಸರೆ... ಪ್ರೇಮ ಧಾರೆ......೧ ಮನದ ಬಯಕೆ ಬೆತ್ತಲು, ಎದೆಯಲಿ ಬರಿ ಕತ್ತಲು ಕಾಣಲಾರದಾಗಿದೆ ಎನೊಂದು. ಪ್ರೇಮ ದೀಪ ಹೊತ್ತಿಸು ಆಸೆಗಳು ಕಾಣುವವು ಒಂದೂ ಬಿಡದೆ ಈಡೇರಿಸು ನೀ ಬಂದು ಪ್ರೇಮಲೋಕದಲಿ ನೆಲೆಸೋಣ ಎಂದೆಂದೂ. ಅಪ್ಸರೆ... ಪ್ರೇಮ ಧಾರೆ.....೨ ------------------ ...✒ *ತ್ರಿನೇತ್ರಜ.*

ಅಮೃತವರ್ಷಿಣಿ

         ಅಮೃತವರ್ಷಿಣಿ         ------------- ಪ್ರೇಮದೊಡನೆ ಪ್ರೇಮ ಬೆರೆಸಿ, ಪತಿ ಮನದ ಕ್ಲೇಷ ಅಳಿಸಿ, ಆಸೆಯೊಡನೆ ಆಸೆ ಗುಣಿಸಿ, ಬಾಳಿದ ಸಹಚಾರಿಣಿ..! ವಾತ್ಸಲ್ಯವ ಸಮಭಾಗಿಸಿ, ನನ್ನ ಜನುಮಕೆ ಜೀವನೀಡಿ. ನೋವನುಂಡು ನಗೆಬೀರಿದ ಚಿರ ಅಮೃತವರ್ಷಿಣಿ.|ಪ| ನವಮಾಸ ಗರ್ಭದೊಳಿರಿಸಿ, ಜಗವನೋಡಲೆನಗೆ ಹರಸಿ, ಎದೆಗಪ್ಪಿ ಹಾಲನೀಡಿ, ಮಲಗಿಸಿದಳು ಲಾಲಿ ಹಾಡಿ ಕರುಣೆ ತುಂಬಿಹ ಗಣಿ. ನನ್ನ ಗಾಯಕೆ ನೊಂದವಳು, ನಿದ್ರೆ ತೂರೆದು ಉಪಚರಿಸಿದಳು, ಕಣ್ಣರೆಪ್ಪೆಯಡಿಯೆ ಪೊರೆದ ಸೌಂಯಮಿ,ಧರ್ಮಪಾಲಿನಿ. ದೇವತೆಯಲಿ ಅಶ್ವಿನಿ ಅಮೃತವರ್ಷಿಣಿ. ಚಿರ ಅಮೃತವರ್ಷಿಣಿ.|೧| ಹೆಜ್ಜೆ ಇಡುವುದ ಕಲಿಸಿದವಳು. ಆಡಿಸಿ ನಗಿಸಿ ನಲಿಸಿದವಳು. ಗುರುವಾಗಿ ನುಡಿಯ ಕಲಿಸಿ ಸಸಿಯ ಮರವಾಗಿಸಿದವಳು. ಫಲವ ಬಯಸದ ಸದ್ಗುಣಿ. ಕೊಟ್ಟಮನೆಯ ಕೀರ್ತಿಕಳಸ. ತೋರಲಿಲ್ಲ ಎಲ್ಲೂ ವಿರಸ. ತಾಳ್ಮೆಯಲ್ಲೇ ಮಿಂದೆದ್ದಿಹ ಸೌಭಾಗ್ಯಧಾರಿಣಿ. ತ್ಯಾಗಮಯಿಗೆ ನಾ ಋಣಿ. ಅಮೃತವರ್ಷಿಣಿ.ಚಿರ ಅಮೃತವರ್ಷಿಣಿ|೨| ..... ...... ...... ...... ...... ...... ....... ✍..ತ್ರಿನೇತ್ರಜ.                 ಶಿವಕುಮಾರ.ಹಿರೇಮಠ.

ನಗದಿರು ಚಂದ್ರಮ

 ಭಾವಗೀತೆ.         ನಗದಿರು ಚಂದ್ರಮ 🌙✨🌙✨🌙✨🌙     ಏಕೆ ನಗುವೆ ನನ್ನ ನೋಡಿ ತಾರೆಯೊಡನೆ ಚಂದ್ರಮ? ಅರಿಯದಾಗಿ, ಕೇಳುತಿಹೆನು ಏಕೆ ನಿನಗೀ ಸಂಭ್ರಮ..?|ಪ| ಏಕೋ ನಿನ್ನ ನಗೆಯೊಳಗೆ ಕುಹಕ ಕಂಡೆ ಈ ದಿನ. ಶೂಲದಂತೆ ನಾಟುತಿವೆಯೋ ರಜತ ನೋಟದ ಬಾಣ. ನೊಂದ ಮನಕೆ ನೋವನೀವೆ ತರವೆ ನಿನ್ನೀ ವರ್ತನ. ಮೋಡಗಳಲಿ ಮರೆಯಾಗು       ಬೇಡ ನಿನ್ನ ಸ್ಪಂದನ......|೧| ನಲ್ಲೆಯ ಮನ ಅರಿಯದಾದೆ ಬೇಸರವನು ತಂದೆನಾ. ಅವಳಿಲ್ಲದೆ ಎನಗೇನಿದೇ ಬೇಸರವೀ ಜೀವನಾ. ಒಂಟಿತನವು ಮೂಡಿಸಿದೆ ಎದೆಯಲೇನೋ ತಲ್ಲಣ. ಮುನಿಸು ಮರೆತು ಬಾರಳೇ ಕರೆವೆ ಹೇಳಿ ಕಾರಣ......|೨| ✍..ತ್ರಿನೇತ್ರಜ. ಶಿವಕುಮಾರ.ಹಿರೇಮಠ.