ಮತ್ತೆ ಬಂತು ಯುಗಾದಿ ನವ ಸಂವತ್ಸರದಾದಿ ||ಪ|| ಚೈತ್ರನಿತ್ತ ಉಡುಗೊರೆ ವನಸಿರಿಗೆ ಹೊಸಸೀರೆ ವರುಷದಷ್ಟು ಹಳೆ ಎಲೆಗಳ ಕಳೆದು ನಿಂತಳು ಇಳೆ ಮತ್ತೆ ಜವ್ವನದ ಕಳೆ||೧|| ಶುಕ ಪಿಕಗಳ ಹಿಮ್ಮೇಳ ಉಸಿರೇರಿಸುವ ಝಳ ವಸಂತ ಬಂದ ಸಂಭ್ರಮಿಸಿ ಚಿಗುರೆಲೆಗಳ ಚುಂಬಿಸಿ ತರುಲತೆ ಮೈ ಪುಳಕಿಸಿ||೨|| ಪ್ರತಿ ವರುಷ ಹೊಸ ಹರುಷ ತೊಡೆವುದು ಹಳೆ ಕಲ್ಮಷ ಕಹಿಯ ಮರೆವ ನಾವೆಲ್ಲ ಭವಿತವನು ಬಲ್ಲವರಿಲ್ಲ ಬೇವುಬೆಲ್ಲ ಸಮ ಎಲ್ಲ||೩|| ✍ ತ್ರಿನೇತ್ರಜ ಶಿವಕುಮಾರ. ಹಿರೇಮಠ.