Skip to main content

Posts

The Glossary We Gained Due To Covid-19

                                                                                The Glossary We Gained Due To Covid-19                                    Shivakumar. Hiremah                     T he birth of a language itself took place in the mode of   communication which   started with the articulation of the combination of particular sounds. Every child starts acquiring the skill of a language by   listen...
Recent posts

ಜಾಝ್ ಪದ್ಯ-೨

  ಜಾಝ್ ಪದ್ಯ-೨ ಮೂಲ - ಕಾರ್ಲ್ ವೆಂಡಾಲ್ ಹೈನಸ್ ಕನ್ನಡಕ್ಕೆ - ಶಿವಕುಮಾರ ಹಿರೇಮಠ ಕಂಡೆಯಾ? ಅದೋ ಅಲ್ಲಿ ನಿಂತಿಹನವನು; (ಕೋಲ್ರಿಡ್ಜ್ ನ )ಪುರಾತನ ಕಪ್ಪು ವರ್ಣಿಯ ನಾವಿಕನ ತೆರದಿ ಬಾಳಿನುದ್ದಕೂ ಅದೆಷ್ಟೋ ಸಂತಪ್ತತೆ ತುಂಬಿಕೊಂಡಿಹ ಮುದಿ ಮೊಗದೊಂದಿಗೆ; ನೇತ್ರಗಳು ಮುಚ್ಚಿಕೊಂಡಿವೆ. ನೂಲುಬಿಚ್ಚಿಹ ಅವನ ಕೊರಳಪಟ್ಟಿಯೂ ಬೆವರಿನಿಂದ ಕಪ್ಪಿಟ್ಟಿಹ ಹಳೆಯ ನೀಲಿ ಷರಾಯಿಯೂ ಮತ್ತೆ, ಸಡಿಲಗೊಂಡು ಅಸಂಬದ್ದವಾಗಿ ಜೋತುಬಿದ್ದಿಹ ಕೊರಳ ಕಂಠಪಟ್ಟಿಯೂ; ಜೊತೆಗೆ, ಜೋತುಬಿದ್ದಿಹ ಅವನುದರವನ್ನು ಕೇವಲ ಎತ್ತಿ ಹಿಡಿಯಲಷ್ಟೇ ಶಖ್ಯವಾದ ಚಿಂದಿಯಾಗಿಹ ಮೇಲಂಗಿಯೂ... ಹೌದು. ಅವನ ಬೂಟುಗಳಲ್ಲಿ ಕಾಗದದ ತುಣುಕುಗಳಿವೆ, ತೂತುಗಳ ಮುಚ್ಚಲೆಂದು. ಹಾಗೆಯೇ, ನೋವು ಇಣುಕುತಿದೆ ಅವನ ಕ್ಷೌರವಿಲ್ಲದ ಒರಟು ಮುಖದಲ್ಲಿನ ಪ್ರತಿ ಸುಕ್ಕಿನಲ್ಲಿಯೂ ಇಷ್ಟಿದ್ದರೂ ಅವನು ನಿಂತಿಹನು ಅಲ್ಲೇ ತನ್ನಷ್ಟಕೆ ತಾನೇ ತಂದುಕೊಂಡ ಒಂಟಿತನದೊಡನೆ ಈಗಲೂ ಶಿರವು ಬಾಗಿದೆ ಕಣ್ಣು ಮುಚ್ಚಿವೆ ಮಂದ್ರ ಶೃತಿಗೆ ಅಣಿಗೊಂಡ ಕಿವಿಗಳು ಚುರುಕುಗೊಂಡಿವೆ ತಾರು ಹೊದಿಕೆಯ ತೂಗದಾರದ ಆಧಾರದಲಿ ಎದೆಗಡ್ಡಲಾಗಿ ಕೊರಳಿಂದ ನೇತುಬಿದ್ದ ಆಲ್ಟೋ ಸ್ಯಾಕ್ಸೋಪೋನು... ಕಂಡೆಯಾ?ಮೆಲ್ಲಗೆ ಅದನ್ನೆತ್ತಿಕೊಂಡು ಅರೆತೆರೆದ ತುಟುಗಿಡುತಿರುವುದ ಕರಿಯರ ಸುವಾರ್ತೆಯ ಜಾಝ್ ಸಂಗೀತವನ್ನು ಜಗದೆಲ್ಲೆಡೆ ಸಾರಲೆಂದು ಧರೆಗವತರಿಸಿಹ ಕಪ್ಪುವರ್ಣಿಯನು ತಾನಾಗಿಹನು ಅದನುಡಿಯಲು ಶುರುವಿಡಲು ...

ಬಿರುಕು

                    * ಬಿರುಕು *           * ಬಿರುಕು * ಕನಸಿನಲ್ಲಿಯೂ ಬಾರದಿರಿ ನನಸನಳಿದ ನೆನಪುಗಳೆ ಮನಸಲೆಂದೂ ಮೂಡದಿರಿ ಅರಳಿ ಮಡಿದ ಭಾವಗಳೆ || ೨ || ನಗುತಿಹ ಹೃದಯವ ನರಳಿಸುವಂತಿಹ ಜಿಗುಟಿದು ನಿಮ್ಮದು ಉಗಮದ ಸೆರಗಲೆ ಬತ್ತುವ ಝರಿಣಿಯು ಸೊಗಸನು ಕಾಣದು|| ೪|| ಆಗಸದಲ್ಲಿನ ಹಕ್ಕಿಗೆ ನಿಶ್ಚಿತ ಗುರಿಯರಿವಿಲ್ಲವೆ ? ಸಾಗದೆ ನಿಂತರೆ ಬಂಡಿಯ ಜೀವನ ಬರಡೇ ಅಲ್ಲವೆ?|| ೬ || ಆಗದ ಹೋಗದ ಮಾತುಗಳೆಲ್ಲವು ಜಗದೊಳ ವಾಡಿಕೆ ಮಾಗದೆ ಹೋಗಿಹ ಒಲವಲಿ ದೊರೆವುದೆ ಗೆಲುವಿನ ಕಾಣಿಕೆ! || ೮ || ನೊಸಲಿನ ಲಿಖಿತಕೆ ವಿಲವಿಲವೆನುತಿಹ ಉಲ್ಕೆಯ ಬಾಳಲಿ ಹುಸಿಹೋಗಿಹವೋ ನಂಬಿದ ನಂಬಿಕೆ ಹೇಗಿದ ಸಹಿಸಲಿ! || ೧೦ || ಗೆಲುವೋ ಸೋಲೋ ಅಪ್ಪಿಕೊಂಡಿಹವು ಚರಿತೆಯ ಪುಟಗಳು ಕಲುಕದೆ ನೋಡಲು ಕಂಗೊಳಿಸದಿರವು ಮುಳುಗಿದ ದಿಟಗಳು || ೧೨ || ಕಾಣದ ಕೈಯೊಳು ಆಡುತ ಉರುಳುವ ಬೊಂಬೆಗಳು ನಾವು ಮೇಣದ ತೆರದಲಿ ಕರಗಿಸುತಿದೆಯೋ ಆ ಕಾಲನ ಕಾವು || ೧೪ || ಜೀವಕೆ ಜೀವವು ಬೆರೆಯದೆ ಹೋದರೆ ಬಾಳದು ಬಂಧನ ನೋವಲು ನಲಿವನು ಕಾಣುವ ಗುಣವೇ ಬದುಕಿನ ಚಂದನ || ೧೬ ||    *_ ತ್ರಿನೇತ್ರಜ _*     ಶಿವಕುಮಾರ ಹಿರೇಮಠ ೧೫-೧೨-೨೦೨೦ _________________________________

ಜೀವ ಬಂಧನ

     *ಜೀವ ಬಂಧನ* ನನ್ನೆದೆಯ ತೋಟದಲಿ ಮಂದಾರ ಹೂ ನೀನು ನೀ ನಗಲು ಅದು ಎನಗೆ ಮುಂಗಾರಿನ ನಲಿವು ನಿನ್ನ ಮೊಗದಲರಳಿದ ಮೋಹಕದ ನಗೆಯಲ್ಲಿ ಕರಗಿ ಹೊಗುವವೆಲ್ಲ ಬಡಜೀವನದ ನೋವು ಏರಿಳಿವ ಅಲೆ ಅಬ್ಬರ ಸಾಗರವೀ ಸಂಸಾರ ನಗುನಗುತ ಸಾಗಿಸುವ ಬಾಳ ದೋಣಿ ನಾವು ಎಲ್ಲಿದ್ದೆವೋ ಆ ಮೊದಲು ಹಸೆಮಣೆಯಲೊಂದಾಗಿ ಬೆಸೆದುಕೊಂಡೆವು ಅಂತೂ ಬೆರೆತಂತೆ ಬೆಲ್ಲ ಮಾವು ಹಿಂಜನ್ಮವ ಕಂಡಿಲ್ಲವೋ ಮುಂಜನ್ಮವ ಅರಿತಿಲ್ಲವೋ ಜನ್ನ ಜನ್ಮಗಳ ಮೈತ್ರಿಯು ನಮ್ಮೀ ಬಾಳ ಬಂಧನವು ನಿನ್ನೆಯ ಕಹಿ ನಮಗೇಕೆ ನಾಳಿನಾ ವ್ಯಥೆಯು ಬೇಕೆ ಇಂದನು ಚಂದದಿ ಕಳೆವ ನೆಮ್ಮದಿಗೆ ಇಲ್ಲ ಬರವು ತ್ರಿನೇತ್ರಜ್. (ಶಿವಕುಮಾರ. ಹಿರೇಮಠ)
                * ಬೇಡಿಕೆ * ಹಾಡಾಗಲು ಹಂಬಲಿಸುವ ಪದಗಳಿಗೆ ದನಿ ಬೇಕಿದೆ ಹೊಸ ಪಲ್ಲವಿ ನವ ಭಾವಕೆ ಸಹಯೋಗ ರಾಗ ಬೇಕಿದೆ||ಪ|| ಮನದ ನೋವು ಕಕ್ಕುವ ಕಹಿ ಭಾವದ ಪದಗಳಿವೆ ಕಾಲ್ತುಳಿತಕೆ ಘಾಸಿಗೊಂಡ ರಕ್ತಸಿಕ್ತವಾದ ಪದಗಳಿವೆ ದೌರ್ಜನ್ಯವ ಜಗದಗಲಕು ಸಾರಿ ಸಾರಿ ಹೇಳಬೇಕಿದೆ||೧|| ಪ್ರೀತಿ ಕಾಣದೆ ಸೊರಗಿಹ ಭಾವ ವಿಹೀನ ಪದಗಳಿವೆ ಭೇದ ಭಾವಕೆ ನೊಂದಿಹ ಬೆಂದಿಹೋದ ಪದಗಳಿವೆ ಅವಿವೇಕದ ಭ್ರಾಂತಿಯನ್ನ ಅಳಿಸಹಾಕಲೇಬೇಕಾಗಿದೆ ||೨|| ..... ..... ..... .... ‌..... ತ್ರಿನೇತ್ರಜ್.
             *ನಿವೇದನೆ* ಉಸಿರಾಗು ಬಾ ನನ್ನೆದೆಗೆ ಹಸಿರಾಗು ಬಾ ಬದುಕಿಗೆ ನಿನ್ನ ಕಾಣದ ನನ್ನ ಕಂಗಳು ತೊರೆದಂತೆ ನೀರನು ಮೀನಿಗೆ || ಪ || ನೀ ಬಂದರೆ ಈ ಜೀವಕೆ ಅನುರಾಗ ಶುಭಯೋಗ ನಿನಗಾಗಿ ನನ್ನದೆಲ್ಲವೂ ಮಾಡವೆನು ಎಲ್ಲಾ ತ್ಯಾಗ ಜೊತೆಯಾಗು ಬಾ ಚೆಲುವೆ ಆವರಿಸು ಹೃದಯವನೀಗ||೧|| ಉಸಿರಿರದೆ ಮಿಡಿಯುವುದೇ ಎದೆಯೊಳಗಿನ ತಕಧಿಮವು ಪ್ರೇಮವಿರದೆ ನುಡಿಯುವುದೇ ಹೃದಯದೊಳಗೆ ಸರಿಗಮವು ಜೊತೆ ನೀನು ಹೆಜ್ಜೆಹಾಕದೇ ಸಾಗದೀ ಬಾಳ  ಪಯಣವು||೨||              ** ** ** **      ತ್ರಿನೇತ್ರಜ್ (ಶಿವಕುಮಾರ. ಹಿರೇಮಠ)
     *ಅವಳು ಕೇಳಿದಾಗ* ಹಿಂದೊಮ್ಮೆ ಕಾಲೇಜಲ್ಲಿ ಕ್ಲಾಸಮೇಟು ಕೇಳಿದಳು ಇಷ್ಟ ನನಗಾವುದೆಂದು ಕನ್ನಡ ನಮ್ ಭಾಷೆ ಇಂಗ್ಲಿಷು ಪರಭಾಷೆ ಇಷ್ಟ ನನಗಾವುದೆಂದು ಇದೊಳ್ಳೆ ಪೇಚಾಟವ ತಂದಿಟ್ಟೆ ಮಹರಾಯ್ತಿ ಇಂಥ ಪ್ರಶ್ನೆ ಕೇಳೊದೇಕೆ ಇಂಗ್ಲಿಷ್‌ ಮಾಧ್ಯಮ ಓದೋ ಅಚ್ಚ ಕನ್ನಡಿಗ ನಾನು ವಿಸ್ತರಿಸಿ ಹೇಳಬೇಕೆ ಕನ್ನಡ ಇಷ್ಟವೋ ಇಂಗ್ಲಿಷು ಇಷ್ಟವೋ ಇಂಥ ಪ್ರಶ್ನೆ ಕೇಳೊದೇಕೆ ವಿಸ್ತರಿಸಿ ಹೇಳಲೆ ಎಂದೆನಾಕೆಗೆ. ಅರಳು ಹುರಿದಂತೆ ನಾನು ಇಂಗ್ಲಿಷು ಮಾತನಾಡಲು ಹುಡುಗರ ಹೊಟ್ಟೆ ಉರಿವುದು ಅಚ್ಚರಿಯ ಮೆಚ್ಚುಗೆಯ ಹುಡುಗಿಯರ ಕುಡಿನೋಟ ನನ್ನತ್ತ ಹರಿದು ಬರುವುದು ಪ್ರೊಫೆಸರ್ಸ ನನ್ನ ಜೊತೆಗೆ ನಗುನಗುತ ಮಾತಾಡಲು ಹೆಮ್ಮೆಯಿಂದ ಎದೆಯುಬ್ಬುವುದು ಮನೆಸೇರಲು ಅಮ್ಮನ ಕನ್ನಡದ ಸಿಹಿ ನುಡಿಯು ಮನಕೇನೋ ತಂಪನೆರೆವುದು ಉದ್ಯೋಗ ಕೈಗೆಟಕಲು ವಿದೇಶಕೂ ಛಾಪು ಹಾಕಲು ಇಂಗ್ಲಿಷಿನ ಚಮಕ್ಕು ಬೇಕು ಮನದಾಳದ ಭಾವವ ಹಾಡಾಗಿ ಉಕ್ಕಿಸಲು ಕನ್ನಡವೇ ಕೈಹಿಡಿಬೇಕು ಎಡವಟ್ಟು ಪ್ರಶ್ನೆ ಇಟ್ಟು ತಲೆಗೆ ಹುಳವನು ಬಿಟ್ಟು ನಗುತಿರುವೆಯಲ್ಲ ನೀನು ಇಂಗ್ಲಿಷ್ ಪಿರಿಡಿನ ಸಮಯವಾಯಿತು ನೋಡು ಬೆಲ್ಲಾಯ್ತು ನಡಿ ಇನ್ನು.              ತ್ರಿನೇತ್ರಜ (ಶಿವಕುಮಾರ ಹಿರೇಮಠ)
        * ಮಿಲನ * ಹೃದಯ ಮೈತ್ರಿಯ ಸಿಹಿ ಮಿಲನ ಸುಖ ಶೃಂಗದ ಹಿತಕರ ಮಿಥುನ ತನ್ನ ಮಡಿಲನೆ ಮಂಚವಾಗಿಸಿ ನಿಶೆ ಕೆಣಕಿಹಳು ಕರೆದೆಮ್ಮನು ಸುಪ್ತ ಚೆಲುವ ನವಿರು ತಾಗುತ ತುಂಬಿತಂತು ಮನಕೆ ಮತ್ತನ್ನು ದೀಪವಾರೊ ಮುನ್ನ ನಯನ ಮಧುರ ನುಡಿಗಳನಾಡಿಹವು ಬೆಳಕ ಮುಚ್ಚುತ ಅಧರಗಳು ಮಧುವರಸಿ ಹೊಸೆದಾಡಿಹವು ಧುತ್ತನೆರಗೆ ರತಿಪತಿ ಜೋಡಿ ಅಂತರಂಗದಿ ಶೃಂಗಾರ ಲೀಲೆ ಶರಣಾಗಿಸಲೆ ಮೊದಲಿಟ್ಟಿರಲು ಓಡಿಹುದು ನಾಚಿಕೆ,ಇಲ್ಲದೆ ನೆಲೆ. ತನುವ ತಾಳ ಆವೇಗಕೆ ಸಿಲುಕಿ ನಲಿದುಲಿಯಿತು ಉಸಿರಾಟ ಗೆಲುವಿಗಾಗಿ ಕಾದು ಕಾಯ್ದು ಸೋಲಿಗೆ ಶರಣಾಯಿತು ಕೂಟ    ತ್ರಿನೇತ್ರಜ. ( ಶಿವಕುಮಾರ ಹಿರೇಮಠ)
*ಇವನಾರೆ ಸಖೀ* ಇವನಾರೆ ಸಖೀ ಹೇಳಿವನಾರೇ|| ನೀಲಾಂಬರ ಕಾಯ ಸೆಟೆದೆದೆ ನಿರ್ಭಯ ಕ್ಷಾತ್ರತೇಜೋಮಯ ಮೊಹನಾಂಗನಿವನಾರೆ ||ಪ|| ಮುನಿಜನರೊಡಗೂಡಿ ಮಿಥಿಲಾ ಸಭೆಯೊಳಗೆ ಅನುಜನೊಡನೆ ಬಂದಿಹ ಧನುರ್ಧರನಿವನಾರೆ ||೧|| ಶಿವ ಧನಸ್ಸನ್ನೆ ಎತ್ತಿ ಬಲದಿಂ ಬಾಗಿಸುತ ಹುರಿಗೊಳಿಸಲೆತ್ನಿಸಿ ತುಂಡರಿಸಿದಿವನಾರೆ ||೨|| ವೀರ ಪರಶುರಾಮಂಗೆ ಪ್ರತಿಯಾಗಿ ನಿಂದಿಹ ಜನಕ ಕುವರಿಯ ವರ ರಾಜಕುವರನಿವನಾರೆ ||೩|| ದಶರಥ ವಂಶಕೇಸರಿ ರಕ್ಕಸ ಕುಲ ಸಂಹಾರಿ ಶ್ರೀಹರಿಯ ಅವತಾರಿ ಶ್ರೀರಾಮನಿಹನೇನೇ. ||೪|| ತ್ರಿನೇತ್ರಜ

ರೈತ ಚೀತ್ಕಾರ

[09/04, 12:43 p.m.] ಭಾವಗೀತೆ * ರೈತ ಚೀತ್ಕಾರ * ಕನಸೇ ಕಮರಿಹೋಯಿತು ಬದುಕೇ ಬಾಡಿಹೋಯಿತು ರೈತನಾಗಿ ಹುಟ್ಟಬಾರದೋ ಮತ್ತೆ ರೈತನಾಗಿ ಹುಟ್ಟಬಾರದೋ||ಪ|| ಸಾಲ ಮಾಡಿ ಎತ್ತೊಂದ ತಂದೆ ಸಿಡಿಲು ಬಡಿದು ಸತ್ತಿತಲ್ಲೋ ದೇವ ನಿನ್ನ ಕರುಣೆ ಎಲ್ಲೊ ಜಂಘಾಬಲ ಉಡುಗಿತಲ್ಲೋ ನನ್ನ ಬಲವೆಲ್ಲ ಕುಸಿಯಿತಲ್ಲೋ||೧|| ಚಿನ್ನದ ಬೆಳೆಯು ನೂರಾಸೆ ತೋರಿ ಅತಿವೃಷ್ಟಿಗೆ ಸಿಲುಕಿತಲ್ಲೋ ಕೆಸರ ಸೇರಿ ಕೊಳೆಯಿತಲ್ಲೋ ಸಾಲ ದೆವ್ವವಾಯಿತಲ್ಲೋ ಕಣ್ಣಲಿ ನೆತ್ತಾರ ತಂದಿತಲ್ಲೋ ||೨|| ಆಳೋ ಜನಕೆ ಅಧಿಕಾರದಾಸೆ ಮತಕಾಗಿ ನೆನೆದುಬರುವರೋ ಪೊಳ್ಳು ಬರವಸೆಯ ತೂರಿಬಿಡುವರೋ ಉಳುವವನಿಗೆ ಆಸರೆ ಯಾರೋ ಯಮ ಕಿಂಕರರು ಬಂದು ನಿಂತರೋ||೩|| ✍ *ತ್ರಿನೇತ್ರಜ*

ಅವ್ಳಂದ್ರೆ ಪ್ರಾಣ

[03/04, 12:33 p.m.] ಭಾವಗೀತೆ      *ಅವ್ಳಂದ್ರೆ ಪ್ರಾಣ* ನಾ ಅವಳ್ನೆಷ್ಟು ಪಿರುತಿಸ್ತೀನಿ ಅಂತಾ ಕೇಳ್ತಿಯಾ ದೋಸ್ತ ಕೇಳ್ಕೊ ಹಾಡಲ್ಲೆ ಹೇಳ್ತೀನಿ ಕೇಳಾಕು ಇರತೈತಿ ಮಸ್ತ ||ಪ|| ಜಾತಿ ಬ್ಯಾರೆ ಅಂತ ನಮ್ಮಪ್ಪ ಬೈದು ಬುದ್ದಿ ಹೇಳ್ದ ಸಿಸ್ತ ಅಕಿನ ಬೇಕಂದ್ರ ಆಸ್ತಿ ಪಾಸ್ತಿ ಕೊಡುದಿಲ್ಲಂದ ಜಬರ್ದಸ್ತ ಅವ್ಳಗಾಗಿ ಎಲ್ಲಾ ಆಸ್ತಿನೇ ನಾ ಬಿಟ್ಬಂದು ಬಿಟ್ಟೆ ನೋಡ ದೋಸ್ತ ರಟ್ಟಿ ಮುರ್ದು ದುಡ್ದು ಬಾಳ್ತೀನಿ ಎದೆ ನೆತ್ತರವ ಅವ್ಳಗಾಗಿ ಬಸ್ತ ||೧|| ಜ್ವಾಳದ ತೆನೆಬಣ್ಣ  ನನ್ನಾಕಿದು ಬೆಣ್ಣಿಗಿಂತ ಮನ್ಸು ಮೆದು ಜಾಸ್ತಿ ಮನ್ಸು ಕೊಟ್ಟೋಳೆ ಇನ್ನೇನ್ಬೇಕು ಹಾಲ್ನಂತ ಅವ್ಳಪ್ರೇಮ ನನ್ನಾಸ್ತಿ ಬೆಟ್ದಸ್ಟು ಪಿರುತಿ ಐತೆ ಅವ್ಳಮ್ಯಾಲೆ ಜೀವಕ್ಕಿಂತ ಹೆಚ್ಚಾಗವ್ಳೆ ದೊಸ್ತ ರೆಪ್ಪೆಯಂಗೆ ಅವ್ಳ ಕಾಪಾಡ್ತೀನಿ ಊರಿಗೂರೇ ನಮ್ನೋಡಿ ಸುಸ್ತ ||೨|| ✍ ತ್ರಿನೇತ್ರಜ್ ಶಿವಕುಮಾರ. ಹಿರೇಮಠ.

ಕಿವಿಮಾತು

 * ಕಿವಿಮಾತು * ಹುಟ್ಟಿದ ಮನೆಯ ಹೊಸಿಲು ನಮಿಸಿ ಪತಿಯ ಮನೆಯೆಡೆ ಸಾಗಮ್ಮ ಹುಟ್ಟಿದ ಮನೆಗೂ ಪತಿಯ ಮನೆಗೂ ಅಮಿತ ಕೀರುತಿಯ ತಾರಮ್ಮ ಹೆತ್ತವರ ನೆನೆಯುತ ಅತ್ತೆಯ ಮನೆಯಲಿ ದುಃಖದ ಮೋರೆಯ ನೀನು ತೋರದಿರು ಅತ್ತೆ ಮಾವರ ಮುಂದೆ ಮತ್ತೆ ಪತಿ ಮುಂದೆ ಏರಿದ ದನಿಯನೆಂದೂ ತೆಗೆಯದಿರು ಎಲ್ಲರಿಗೂ ಮುನ್ನ ನೀ ನಸುಕಲ್ಲೇ ಎದ್ದೇಳು ಮುಚ್ಚಟೆಯಲಿ ಮನೆಯ ಕಾರ್ಯ ಮಾಡು ಎಲ್ಲರಿಗೂ ಉಣಬಡಿಸಿ ಮಿಕ್ಕಷ್ಟನ್ನೆ ಉಂಡು ಪತಿರಾಯ ಮಲಗಿದ ಮೇಲೆ ನಿದ್ದೆ ಮಾಡು ನಾದಿನಿ ಮೈದುನರ ಮಕ್ಕಳೆಂದು ತಿಳಿದು ತಪ್ಪುಗಳ ಹೊಟ್ಟೆಯಲಿಟ್ಟು ಮನ್ನಿಸಬೇಕು ಎಲ್ಲರ ಏಳಿಗೆಗೂ ದೇವರ ಬೇಡಿಕೊಂಡು ವರುಷಕ್ಕೇ ಮಡಿಲ ಮಗುವು ನಗಬೇಕು. """""""""" """""""""" ✍🏼 ತ್ರಿನೇತ್ರಜ  ಶಿವಕುಮಾರ ಹಿರೇಮಠ

ತನ್ಮಯತೆ

ತನ್ಮಯತೆ ಮುರಳಿ ಲೋಲನ ಸ್ನೇಹದ ಚಂದನ ಪುಷ್ಪಾಲಂಕೃತ ಉದ್ಯಾನ| ಶ್ಯಾಮನ ಸ್ಪಂದನ ಪಾವನ ತನುಮನ ಧನ್ಯವೊ‌‌‌‌‌ ರಾಧಾ ಜೀವನ||ಪ|| ಚಲುವಿನ ಹೂಗಳ ಚೆಲುವ ಮುಡಿಸಲು ತನ್ಮಯ ಚೆಲ್ವೆಯ ಜೀವ| ತರುಣಿ ಹೃದಯದ ಪ್ರೇಮ ಕೊಳದೊಳು ನೈದಿಲೆ ಅರಳಿದ ಭಾವ||೧|| ಕರ ದರ್ಪಣದೊಳು ತನ್ನ ತಾ ನೋಡದೆ ಸೆರೆಹಿಡಿದಳು ಮಾಧವನ| ನೀಲ ವರ್ಣದ ಶಶಿಯ ತೆರದಲಿ ಕಂಡಿಹನು ಯದುನಂದನ||೨|| ✍🏼 ತ್ರಿನೇತ್ರಜ್ ಶಿವಕುಮಾರ ಹಿರೇಮಠ

ಪ್ರೇಮಪೂಜೆ

      * ಪ್ರೇಮಪೂಜೆ * ಹಿಂದಾರು ಜನ್ಮದಲೂ ನೀ ನನ್ನ ಜೊತೆಗಾತಿ ಮುಂಜನ್ಮದಲೂ ನೀನೇ ಈ ಹೃದಯಕೆ ಒಡತಿ ನೆಂಚಿಕೊಂಡು ಸಾಗುವ ಹಂಚಿಕೊಂಡ ಪ್ರೀತಿ  ||ಪ|| ಪುಟಕ್ಕಿಟ್ಟ ಚಿನ್ನದಂತೆ ನಿನ್ನ ಹೂ ಮನಸು ಜಾಜಿಯ ನಾಚಿಸುವ ನಗುವಿನ ಸೊಗಸು ಜೇನಿಗೆ ಬೆಲ್ಲವನು ಬೆರೆಸಿದಂತೆ ಮುನಿಸು ಏರಿಳಿವ ಬಾಳಿನಲಿ ನಗುತ ನನ್ನ ನಗಿಸು ||೧|| ಕಡೆದು ವಿರಹದ ಹೆಪ್ಪ ಬೇಗೆಯನು ಅಳಿಸು ಉದಿಪ ನವನೀತವ ಬಿಸಿಉಸಿರಲಿ ಕುದಿಸು ಎದೆತಾಳದ ಸಂಗೀತ ಆಲಿಸುತ ಮದಿಸು ಪ್ರೇಮ ಪೂಜಾರಿ ನಾ ಸೇವೆಯನು ಸುಖಿಸು||೨|| ✍🏼  ತ್ರಿನೇತ್ರಜ್ ಶಿವಕುಮಾರ. ಹಿರೇಮಠ.