ಲಾಲಿ ಹಾಡು
ನಯವಾಗಿ ಕಣ್ಸೇರಲು
ನಿದಿರಾದೇವಿ ಬಂದಿಹಳು|
ಹೊಂಗನಸ ತೋರಿಸಲು
ನಿನ್ನ ಕರೆದೊಯ್ಯುವಳು|
ಮಲಗೆನ್ನ ಮಗುವೆ,
ನಾ ಲಾಲಿ ಹಾಡುವೆ.
ಲಾಲಿ ಜೊ ಜೊ ಲಾಲಿ||ಪ||
ಗೆಜ್ಜೆಕಾಲು ಕುಣಿಕುಣಿದು ಸುಸ್ತಾಗಿವೆ.
ನೋಟವಾಡಿ ನಯನಗಳು ದಣಿದಿವೆ.
ಅಮೃತವ ಹೀರಿದ ಅಧರಗಳು
ಮೌನಕೆ ಶರಣಾಗ ಬಯಸಿವೆ.
ಮಲಗೆನ್ನ ಸಿರಿಯೆ,
ತಾರೆಗಳ ದೊರೆಯೆ||೧||
ಪರಿಪೂರ್ಣ ಜೀವನ ನಾಕಂಡೆ.
ತಾಯ್ತನದ ಸುಖವ ನಾನುಂಡೆ.
ನಿನ್ನ ಮುಗುಳು ಹೂನಗೆಯೊಂದೆ
ಹಿಗ್ಗಿನ ಹೊನಲೆಂದು ಮನಗಂಡೆ.
ತೆಕ್ಕೆಯೊಳು ಹಾಯಾಗಿರು
ಒಲವಿನ ಗಿಣಿಯೆ||೨||
ನಿನ್ನಿಂದ ಈ ಮನೆ ಸಗ್ಗಾಯಿತು,
ಹಿಗ್ಗಿನ ಹೊನಲು ಹರಿದಾಡಿತು.
ಮನೆಯ ಕೀರ್ತಿ ಕಲಶ ನೀನಾಗಿ
ಕೀರ್ತಿವಂತನಾಗು ಮಾಡಿ ಒಳಿತು.
ಮನೆಗೆ ನಂದಾದೀಪ
ನಿನ್ನೀ ಮುದ್ದು ರೂಪ||೩||
.... ..... .... .... .... ... ....
..✍ತ್ರಿನೇತ್ರಜ.
Comments
Post a Comment