ಜಾಝ್ ಪದ್ಯ-೨ ಮೂಲ - ಕಾರ್ಲ್ ವೆಂಡಾಲ್ ಹೈನಸ್ ಕನ್ನಡಕ್ಕೆ - ಶಿವಕುಮಾರ ಹಿರೇಮಠ ಕಂಡೆಯಾ? ಅದೋ ಅಲ್ಲಿ ನಿಂತಿಹನವನು; (ಕೋಲ್ರಿಡ್ಜ್ ನ )ಪುರಾತನ ಕಪ್ಪು ವರ್ಣಿಯ ನಾವಿಕನ ತೆರದಿ ಬಾಳಿನುದ್ದಕೂ ಅದೆಷ್ಟೋ ಸಂತಪ್ತತೆ ತುಂಬಿಕೊಂಡಿಹ ಮುದಿ ಮೊಗದೊಂದಿಗೆ; ನೇತ್ರಗಳು ಮುಚ್ಚಿಕೊಂಡಿವೆ. ನೂಲುಬಿಚ್ಚಿಹ ಅವನ ಕೊರಳಪಟ್ಟಿಯೂ ಬೆವರಿನಿಂದ ಕಪ್ಪಿಟ್ಟಿಹ ಹಳೆಯ ನೀಲಿ ಷರಾಯಿಯೂ ಮತ್ತೆ, ಸಡಿಲಗೊಂಡು ಅಸಂಬದ್ದವಾಗಿ ಜೋತುಬಿದ್ದಿಹ ಕೊರಳ ಕಂಠಪಟ್ಟಿಯೂ; ಜೊತೆಗೆ, ಜೋತುಬಿದ್ದಿಹ ಅವನುದರವನ್ನು ಕೇವಲ ಎತ್ತಿ ಹಿಡಿಯಲಷ್ಟೇ ಶಖ್ಯವಾದ ಚಿಂದಿಯಾಗಿಹ ಮೇಲಂಗಿಯೂ... ಹೌದು. ಅವನ ಬೂಟುಗಳಲ್ಲಿ ಕಾಗದದ ತುಣುಕುಗಳಿವೆ, ತೂತುಗಳ ಮುಚ್ಚಲೆಂದು. ಹಾಗೆಯೇ, ನೋವು ಇಣುಕುತಿದೆ ಅವನ ಕ್ಷೌರವಿಲ್ಲದ ಒರಟು ಮುಖದಲ್ಲಿನ ಪ್ರತಿ ಸುಕ್ಕಿನಲ್ಲಿಯೂ ಇಷ್ಟಿದ್ದರೂ ಅವನು ನಿಂತಿಹನು ಅಲ್ಲೇ ತನ್ನಷ್ಟಕೆ ತಾನೇ ತಂದುಕೊಂಡ ಒಂಟಿತನದೊಡನೆ ಈಗಲೂ ಶಿರವು ಬಾಗಿದೆ ಕಣ್ಣು ಮುಚ್ಚಿವೆ ಮಂದ್ರ ಶೃತಿಗೆ ಅಣಿಗೊಂಡ ಕಿವಿಗಳು ಚುರುಕುಗೊಂಡಿವೆ ತಾರು ಹೊದಿಕೆಯ ತೂಗದಾರದ ಆಧಾರದಲಿ ಎದೆಗಡ್ಡಲಾಗಿ ಕೊರಳಿಂದ ನೇತುಬಿದ್ದ ಆಲ್ಟೋ ಸ್ಯಾಕ್ಸೋಪೋನು... ಕಂಡೆಯಾ?ಮೆಲ್ಲಗೆ ಅದನ್ನೆತ್ತಿಕೊಂಡು ಅರೆತೆರೆದ ತುಟುಗಿಡುತಿರುವುದ ಕರಿಯರ ಸುವಾರ್ತೆಯ ಜಾಝ್ ಸಂಗೀತವನ್ನು ಜಗದೆಲ್ಲೆಡೆ ಸಾರಲೆಂದು ಧರೆಗವತರಿಸಿಹ ಕಪ್ಪುವರ್ಣಿಯನು ತಾನಾಗಿಹನು ಅದನುಡಿಯಲು ಶುರುವಿಡಲು ...