Skip to main content

Posts

                * ಬೇಡಿಕೆ * ಹಾಡಾಗಲು ಹಂಬಲಿಸುವ ಪದಗಳಿಗೆ ದನಿ ಬೇಕಿದೆ ಹೊಸ ಪಲ್ಲವಿ ನವ ಭಾವಕೆ ಸಹಯೋಗ ರಾಗ ಬೇಕಿದೆ||ಪ|| ಮನದ ನೋವು ಕಕ್ಕುವ ಕಹಿ ಭಾವದ ಪದಗಳಿವೆ ಕಾಲ್ತುಳಿತಕೆ ಘಾಸಿಗೊಂಡ ರಕ್ತಸಿಕ್ತವಾದ ಪದಗಳಿವೆ ದೌರ್ಜನ್ಯವ ಜಗದಗಲಕು ಸಾರಿ ಸಾರಿ ಹೇಳಬೇಕಿದೆ||೧|| ಪ್ರೀತಿ ಕಾಣದೆ ಸೊರಗಿಹ ಭಾವ ವಿಹೀನ ಪದಗಳಿವೆ ಭೇದ ಭಾವಕೆ ನೊಂದಿಹ ಬೆಂದಿಹೋದ ಪದಗಳಿವೆ ಅವಿವೇಕದ ಭ್ರಾಂತಿಯನ್ನ ಅಳಿಸಹಾಕಲೇಬೇಕಾಗಿದೆ ||೨|| ..... ..... ..... .... ‌..... ತ್ರಿನೇತ್ರಜ್.
             *ನಿವೇದನೆ* ಉಸಿರಾಗು ಬಾ ನನ್ನೆದೆಗೆ ಹಸಿರಾಗು ಬಾ ಬದುಕಿಗೆ ನಿನ್ನ ಕಾಣದ ನನ್ನ ಕಂಗಳು ತೊರೆದಂತೆ ನೀರನು ಮೀನಿಗೆ || ಪ || ನೀ ಬಂದರೆ ಈ ಜೀವಕೆ ಅನುರಾಗ ಶುಭಯೋಗ ನಿನಗಾಗಿ ನನ್ನದೆಲ್ಲವೂ ಮಾಡವೆನು ಎಲ್ಲಾ ತ್ಯಾಗ ಜೊತೆಯಾಗು ಬಾ ಚೆಲುವೆ ಆವರಿಸು ಹೃದಯವನೀಗ||೧|| ಉಸಿರಿರದೆ ಮಿಡಿಯುವುದೇ ಎದೆಯೊಳಗಿನ ತಕಧಿಮವು ಪ್ರೇಮವಿರದೆ ನುಡಿಯುವುದೇ ಹೃದಯದೊಳಗೆ ಸರಿಗಮವು ಜೊತೆ ನೀನು ಹೆಜ್ಜೆಹಾಕದೇ ಸಾಗದೀ ಬಾಳ  ಪಯಣವು||೨||              ** ** ** **      ತ್ರಿನೇತ್ರಜ್ (ಶಿವಕುಮಾರ. ಹಿರೇಮಠ)
     *ಅವಳು ಕೇಳಿದಾಗ* ಹಿಂದೊಮ್ಮೆ ಕಾಲೇಜಲ್ಲಿ ಕ್ಲಾಸಮೇಟು ಕೇಳಿದಳು ಇಷ್ಟ ನನಗಾವುದೆಂದು ಕನ್ನಡ ನಮ್ ಭಾಷೆ ಇಂಗ್ಲಿಷು ಪರಭಾಷೆ ಇಷ್ಟ ನನಗಾವುದೆಂದು ಇದೊಳ್ಳೆ ಪೇಚಾಟವ ತಂದಿಟ್ಟೆ ಮಹರಾಯ್ತಿ ಇಂಥ ಪ್ರಶ್ನೆ ಕೇಳೊದೇಕೆ ಇಂಗ್ಲಿಷ್‌ ಮಾಧ್ಯಮ ಓದೋ ಅಚ್ಚ ಕನ್ನಡಿಗ ನಾನು ವಿಸ್ತರಿಸಿ ಹೇಳಬೇಕೆ ಕನ್ನಡ ಇಷ್ಟವೋ ಇಂಗ್ಲಿಷು ಇಷ್ಟವೋ ಇಂಥ ಪ್ರಶ್ನೆ ಕೇಳೊದೇಕೆ ವಿಸ್ತರಿಸಿ ಹೇಳಲೆ ಎಂದೆನಾಕೆಗೆ. ಅರಳು ಹುರಿದಂತೆ ನಾನು ಇಂಗ್ಲಿಷು ಮಾತನಾಡಲು ಹುಡುಗರ ಹೊಟ್ಟೆ ಉರಿವುದು ಅಚ್ಚರಿಯ ಮೆಚ್ಚುಗೆಯ ಹುಡುಗಿಯರ ಕುಡಿನೋಟ ನನ್ನತ್ತ ಹರಿದು ಬರುವುದು ಪ್ರೊಫೆಸರ್ಸ ನನ್ನ ಜೊತೆಗೆ ನಗುನಗುತ ಮಾತಾಡಲು ಹೆಮ್ಮೆಯಿಂದ ಎದೆಯುಬ್ಬುವುದು ಮನೆಸೇರಲು ಅಮ್ಮನ ಕನ್ನಡದ ಸಿಹಿ ನುಡಿಯು ಮನಕೇನೋ ತಂಪನೆರೆವುದು ಉದ್ಯೋಗ ಕೈಗೆಟಕಲು ವಿದೇಶಕೂ ಛಾಪು ಹಾಕಲು ಇಂಗ್ಲಿಷಿನ ಚಮಕ್ಕು ಬೇಕು ಮನದಾಳದ ಭಾವವ ಹಾಡಾಗಿ ಉಕ್ಕಿಸಲು ಕನ್ನಡವೇ ಕೈಹಿಡಿಬೇಕು ಎಡವಟ್ಟು ಪ್ರಶ್ನೆ ಇಟ್ಟು ತಲೆಗೆ ಹುಳವನು ಬಿಟ್ಟು ನಗುತಿರುವೆಯಲ್ಲ ನೀನು ಇಂಗ್ಲಿಷ್ ಪಿರಿಡಿನ ಸಮಯವಾಯಿತು ನೋಡು ಬೆಲ್ಲಾಯ್ತು ನಡಿ ಇನ್ನು.              ತ್ರಿನೇತ್ರಜ (ಶಿವಕುಮಾರ ಹಿರೇಮಠ)
        * ಮಿಲನ * ಹೃದಯ ಮೈತ್ರಿಯ ಸಿಹಿ ಮಿಲನ ಸುಖ ಶೃಂಗದ ಹಿತಕರ ಮಿಥುನ ತನ್ನ ಮಡಿಲನೆ ಮಂಚವಾಗಿಸಿ ನಿಶೆ ಕೆಣಕಿಹಳು ಕರೆದೆಮ್ಮನು ಸುಪ್ತ ಚೆಲುವ ನವಿರು ತಾಗುತ ತುಂಬಿತಂತು ಮನಕೆ ಮತ್ತನ್ನು ದೀಪವಾರೊ ಮುನ್ನ ನಯನ ಮಧುರ ನುಡಿಗಳನಾಡಿಹವು ಬೆಳಕ ಮುಚ್ಚುತ ಅಧರಗಳು ಮಧುವರಸಿ ಹೊಸೆದಾಡಿಹವು ಧುತ್ತನೆರಗೆ ರತಿಪತಿ ಜೋಡಿ ಅಂತರಂಗದಿ ಶೃಂಗಾರ ಲೀಲೆ ಶರಣಾಗಿಸಲೆ ಮೊದಲಿಟ್ಟಿರಲು ಓಡಿಹುದು ನಾಚಿಕೆ,ಇಲ್ಲದೆ ನೆಲೆ. ತನುವ ತಾಳ ಆವೇಗಕೆ ಸಿಲುಕಿ ನಲಿದುಲಿಯಿತು ಉಸಿರಾಟ ಗೆಲುವಿಗಾಗಿ ಕಾದು ಕಾಯ್ದು ಸೋಲಿಗೆ ಶರಣಾಯಿತು ಕೂಟ    ತ್ರಿನೇತ್ರಜ. ( ಶಿವಕುಮಾರ ಹಿರೇಮಠ)
*ಇವನಾರೆ ಸಖೀ* ಇವನಾರೆ ಸಖೀ ಹೇಳಿವನಾರೇ|| ನೀಲಾಂಬರ ಕಾಯ ಸೆಟೆದೆದೆ ನಿರ್ಭಯ ಕ್ಷಾತ್ರತೇಜೋಮಯ ಮೊಹನಾಂಗನಿವನಾರೆ ||ಪ|| ಮುನಿಜನರೊಡಗೂಡಿ ಮಿಥಿಲಾ ಸಭೆಯೊಳಗೆ ಅನುಜನೊಡನೆ ಬಂದಿಹ ಧನುರ್ಧರನಿವನಾರೆ ||೧|| ಶಿವ ಧನಸ್ಸನ್ನೆ ಎತ್ತಿ ಬಲದಿಂ ಬಾಗಿಸುತ ಹುರಿಗೊಳಿಸಲೆತ್ನಿಸಿ ತುಂಡರಿಸಿದಿವನಾರೆ ||೨|| ವೀರ ಪರಶುರಾಮಂಗೆ ಪ್ರತಿಯಾಗಿ ನಿಂದಿಹ ಜನಕ ಕುವರಿಯ ವರ ರಾಜಕುವರನಿವನಾರೆ ||೩|| ದಶರಥ ವಂಶಕೇಸರಿ ರಕ್ಕಸ ಕುಲ ಸಂಹಾರಿ ಶ್ರೀಹರಿಯ ಅವತಾರಿ ಶ್ರೀರಾಮನಿಹನೇನೇ. ||೪|| ತ್ರಿನೇತ್ರಜ

ರೈತ ಚೀತ್ಕಾರ

[09/04, 12:43 p.m.] ಭಾವಗೀತೆ * ರೈತ ಚೀತ್ಕಾರ * ಕನಸೇ ಕಮರಿಹೋಯಿತು ಬದುಕೇ ಬಾಡಿಹೋಯಿತು ರೈತನಾಗಿ ಹುಟ್ಟಬಾರದೋ ಮತ್ತೆ ರೈತನಾಗಿ ಹುಟ್ಟಬಾರದೋ||ಪ|| ಸಾಲ ಮಾಡಿ ಎತ್ತೊಂದ ತಂದೆ ಸಿಡಿಲು ಬಡಿದು ಸತ್ತಿತಲ್ಲೋ ದೇವ ನಿನ್ನ ಕರುಣೆ ಎಲ್ಲೊ ಜಂಘಾಬಲ ಉಡುಗಿತಲ್ಲೋ ನನ್ನ ಬಲವೆಲ್ಲ ಕುಸಿಯಿತಲ್ಲೋ||೧|| ಚಿನ್ನದ ಬೆಳೆಯು ನೂರಾಸೆ ತೋರಿ ಅತಿವೃಷ್ಟಿಗೆ ಸಿಲುಕಿತಲ್ಲೋ ಕೆಸರ ಸೇರಿ ಕೊಳೆಯಿತಲ್ಲೋ ಸಾಲ ದೆವ್ವವಾಯಿತಲ್ಲೋ ಕಣ್ಣಲಿ ನೆತ್ತಾರ ತಂದಿತಲ್ಲೋ ||೨|| ಆಳೋ ಜನಕೆ ಅಧಿಕಾರದಾಸೆ ಮತಕಾಗಿ ನೆನೆದುಬರುವರೋ ಪೊಳ್ಳು ಬರವಸೆಯ ತೂರಿಬಿಡುವರೋ ಉಳುವವನಿಗೆ ಆಸರೆ ಯಾರೋ ಯಮ ಕಿಂಕರರು ಬಂದು ನಿಂತರೋ||೩|| ✍ *ತ್ರಿನೇತ್ರಜ*

ಅವ್ಳಂದ್ರೆ ಪ್ರಾಣ

[03/04, 12:33 p.m.] ಭಾವಗೀತೆ      *ಅವ್ಳಂದ್ರೆ ಪ್ರಾಣ* ನಾ ಅವಳ್ನೆಷ್ಟು ಪಿರುತಿಸ್ತೀನಿ ಅಂತಾ ಕೇಳ್ತಿಯಾ ದೋಸ್ತ ಕೇಳ್ಕೊ ಹಾಡಲ್ಲೆ ಹೇಳ್ತೀನಿ ಕೇಳಾಕು ಇರತೈತಿ ಮಸ್ತ ||ಪ|| ಜಾತಿ ಬ್ಯಾರೆ ಅಂತ ನಮ್ಮಪ್ಪ ಬೈದು ಬುದ್ದಿ ಹೇಳ್ದ ಸಿಸ್ತ ಅಕಿನ ಬೇಕಂದ್ರ ಆಸ್ತಿ ಪಾಸ್ತಿ ಕೊಡುದಿಲ್ಲಂದ ಜಬರ್ದಸ್ತ ಅವ್ಳಗಾಗಿ ಎಲ್ಲಾ ಆಸ್ತಿನೇ ನಾ ಬಿಟ್ಬಂದು ಬಿಟ್ಟೆ ನೋಡ ದೋಸ್ತ ರಟ್ಟಿ ಮುರ್ದು ದುಡ್ದು ಬಾಳ್ತೀನಿ ಎದೆ ನೆತ್ತರವ ಅವ್ಳಗಾಗಿ ಬಸ್ತ ||೧|| ಜ್ವಾಳದ ತೆನೆಬಣ್ಣ  ನನ್ನಾಕಿದು ಬೆಣ್ಣಿಗಿಂತ ಮನ್ಸು ಮೆದು ಜಾಸ್ತಿ ಮನ್ಸು ಕೊಟ್ಟೋಳೆ ಇನ್ನೇನ್ಬೇಕು ಹಾಲ್ನಂತ ಅವ್ಳಪ್ರೇಮ ನನ್ನಾಸ್ತಿ ಬೆಟ್ದಸ್ಟು ಪಿರುತಿ ಐತೆ ಅವ್ಳಮ್ಯಾಲೆ ಜೀವಕ್ಕಿಂತ ಹೆಚ್ಚಾಗವ್ಳೆ ದೊಸ್ತ ರೆಪ್ಪೆಯಂಗೆ ಅವ್ಳ ಕಾಪಾಡ್ತೀನಿ ಊರಿಗೂರೇ ನಮ್ನೋಡಿ ಸುಸ್ತ ||೨|| ✍ ತ್ರಿನೇತ್ರಜ್ ಶಿವಕುಮಾರ. ಹಿರೇಮಠ.

ಕಿವಿಮಾತು

 * ಕಿವಿಮಾತು * ಹುಟ್ಟಿದ ಮನೆಯ ಹೊಸಿಲು ನಮಿಸಿ ಪತಿಯ ಮನೆಯೆಡೆ ಸಾಗಮ್ಮ ಹುಟ್ಟಿದ ಮನೆಗೂ ಪತಿಯ ಮನೆಗೂ ಅಮಿತ ಕೀರುತಿಯ ತಾರಮ್ಮ ಹೆತ್ತವರ ನೆನೆಯುತ ಅತ್ತೆಯ ಮನೆಯಲಿ ದುಃಖದ ಮೋರೆಯ ನೀನು ತೋರದಿರು ಅತ್ತೆ ಮಾವರ ಮುಂದೆ ಮತ್ತೆ ಪತಿ ಮುಂದೆ ಏರಿದ ದನಿಯನೆಂದೂ ತೆಗೆಯದಿರು ಎಲ್ಲರಿಗೂ ಮುನ್ನ ನೀ ನಸುಕಲ್ಲೇ ಎದ್ದೇಳು ಮುಚ್ಚಟೆಯಲಿ ಮನೆಯ ಕಾರ್ಯ ಮಾಡು ಎಲ್ಲರಿಗೂ ಉಣಬಡಿಸಿ ಮಿಕ್ಕಷ್ಟನ್ನೆ ಉಂಡು ಪತಿರಾಯ ಮಲಗಿದ ಮೇಲೆ ನಿದ್ದೆ ಮಾಡು ನಾದಿನಿ ಮೈದುನರ ಮಕ್ಕಳೆಂದು ತಿಳಿದು ತಪ್ಪುಗಳ ಹೊಟ್ಟೆಯಲಿಟ್ಟು ಮನ್ನಿಸಬೇಕು ಎಲ್ಲರ ಏಳಿಗೆಗೂ ದೇವರ ಬೇಡಿಕೊಂಡು ವರುಷಕ್ಕೇ ಮಡಿಲ ಮಗುವು ನಗಬೇಕು. """""""""" """""""""" ✍🏼 ತ್ರಿನೇತ್ರಜ  ಶಿವಕುಮಾರ ಹಿರೇಮಠ

ತನ್ಮಯತೆ

ತನ್ಮಯತೆ ಮುರಳಿ ಲೋಲನ ಸ್ನೇಹದ ಚಂದನ ಪುಷ್ಪಾಲಂಕೃತ ಉದ್ಯಾನ| ಶ್ಯಾಮನ ಸ್ಪಂದನ ಪಾವನ ತನುಮನ ಧನ್ಯವೊ‌‌‌‌‌ ರಾಧಾ ಜೀವನ||ಪ|| ಚಲುವಿನ ಹೂಗಳ ಚೆಲುವ ಮುಡಿಸಲು ತನ್ಮಯ ಚೆಲ್ವೆಯ ಜೀವ| ತರುಣಿ ಹೃದಯದ ಪ್ರೇಮ ಕೊಳದೊಳು ನೈದಿಲೆ ಅರಳಿದ ಭಾವ||೧|| ಕರ ದರ್ಪಣದೊಳು ತನ್ನ ತಾ ನೋಡದೆ ಸೆರೆಹಿಡಿದಳು ಮಾಧವನ| ನೀಲ ವರ್ಣದ ಶಶಿಯ ತೆರದಲಿ ಕಂಡಿಹನು ಯದುನಂದನ||೨|| ✍🏼 ತ್ರಿನೇತ್ರಜ್ ಶಿವಕುಮಾರ ಹಿರೇಮಠ

ಪ್ರೇಮಪೂಜೆ

      * ಪ್ರೇಮಪೂಜೆ * ಹಿಂದಾರು ಜನ್ಮದಲೂ ನೀ ನನ್ನ ಜೊತೆಗಾತಿ ಮುಂಜನ್ಮದಲೂ ನೀನೇ ಈ ಹೃದಯಕೆ ಒಡತಿ ನೆಂಚಿಕೊಂಡು ಸಾಗುವ ಹಂಚಿಕೊಂಡ ಪ್ರೀತಿ  ||ಪ|| ಪುಟಕ್ಕಿಟ್ಟ ಚಿನ್ನದಂತೆ ನಿನ್ನ ಹೂ ಮನಸು ಜಾಜಿಯ ನಾಚಿಸುವ ನಗುವಿನ ಸೊಗಸು ಜೇನಿಗೆ ಬೆಲ್ಲವನು ಬೆರೆಸಿದಂತೆ ಮುನಿಸು ಏರಿಳಿವ ಬಾಳಿನಲಿ ನಗುತ ನನ್ನ ನಗಿಸು ||೧|| ಕಡೆದು ವಿರಹದ ಹೆಪ್ಪ ಬೇಗೆಯನು ಅಳಿಸು ಉದಿಪ ನವನೀತವ ಬಿಸಿಉಸಿರಲಿ ಕುದಿಸು ಎದೆತಾಳದ ಸಂಗೀತ ಆಲಿಸುತ ಮದಿಸು ಪ್ರೇಮ ಪೂಜಾರಿ ನಾ ಸೇವೆಯನು ಸುಖಿಸು||೨|| ✍🏼  ತ್ರಿನೇತ್ರಜ್ ಶಿವಕುಮಾರ. ಹಿರೇಮಠ.

ಯುಗಾದಿಯಾಗಮನ

ಮತ್ತೆ ಬಂತು ಯುಗಾದಿ ನವ ಸಂವತ್ಸರದಾದಿ ||ಪ|| ಚೈತ್ರನಿತ್ತ ಉಡುಗೊರೆ ವನಸಿರಿಗೆ ಹೊಸಸೀರೆ ವರುಷದಷ್ಟು ಹಳೆ ಎಲೆಗಳ ಕಳೆದು ನಿಂತಳು ಇಳೆ ಮತ್ತೆ ಜವ್ವನದ ಕಳೆ||೧|| ಶುಕ ಪಿಕಗಳ ಹಿಮ್ಮೇಳ ಉಸಿರೇರಿಸುವ ಝಳ ವಸಂತ ಬಂದ ಸಂಭ್ರಮಿಸಿ ಚಿಗುರೆಲೆಗಳ ಚುಂಬಿಸಿ ತರುಲತೆ ಮೈ ಪುಳಕಿಸಿ||೨|| ಪ್ರತಿ ವರುಷ ಹೊಸ ಹರುಷ ತೊಡೆವುದು ಹಳೆ ಕಲ್ಮಷ ಕಹಿಯ ಮರೆವ ನಾವೆಲ್ಲ ಭವಿತವನು ಬಲ್ಲವರಿಲ್ಲ ಬೇವುಬೆಲ್ಲ ಸಮ ಎಲ್ಲ||೩|| ✍ ತ್ರಿನೇತ್ರಜ ಶಿವಕುಮಾರ. ಹಿರೇಮಠ.

*ನಿನ್ನ ನೆನಪು*

*ನಿನ್ನ ನೆನಪು* [07/02, 10:25 a.m.] ಮಲೆನಾಡ ಮೈಸಿರಿಯ ಪುಟ್ಟ ಬೆಟ್ಟದಾ ಮೇಲೆ ಎಕಾಂಗಿಯಾಗಿರಲೆನಗೆ ಮತ್ತೆ ಬಂದಿಹುದು ನಿನ್ನ ನೆನಪು ಮುಸ್ಸಂಜೆ ವೇಳೆಯಲಿ ಬೆಟ್ಟದಾ ಮರೆಯಲ್ಲಿ ಸಂಧ್ಯೆಯ ಸಂಧಿಸುವ ನೇಸರನು ಜ್ಞಾಪಿಸಿಹ ನಿನ್ನ ನೆನಪು ಸುಳಿ  ಸುಳಿದು ತಂಗಾಳಿ ಮುದದಿ ತನುವನು ಕೆಣಕಿ ಪಿಸುಮಾತನಾಡಿರಲು ಮನವನು ಕಾಡಿತ್ತು ನಿನ್ನ ನೆನಪು ಎಲ್ಲಿಂದಲೋ ತಾ ತೇಲಿ ಅಲೆ ಅಲೆಯಲಿ ಬರುತಿಹ ನಿನ್ನ ಇಂಚರ ಹೋಲುವ ವೇಣುಗಾನವು ತಂತು ನಿನ್ನ ನೆನಪು ಗೋಧೂಳಿಯ ರಂಗು ಬಾನೆಡೆಗೆ ಸಾಗಿರಲು ಆಗಸದಿ ಆಡುತಿಹ ಆ ಗಾಳಿಪಟದಂತಿಹುದು ನಿನ್ನ ನೆನಪು ನನ್ನ ಮುಸ್ಸಂಜೆಯಲು ಇನ್ನೇನು ಉಳಿದಿಹುದು ಎದೆಗೆ ಉಸಿರಿರುವವರೆಗು ಆಸರೆಯ ಒರತೆಯಿದು ನಿನ್ನ ನೆನಪು *** **** *** **** *** ✍🏼 ತ್ರಿನೇತ್ರಜ್  ಶಿವಕುಮಾರ. ಹಿರೇಮಠ

*ಅನುಪಮ*

ಹನಿ ಹನಿ ತುಂತುರು ತಿಂಗಳ ವಿಶೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಭಾವಗೀತೆ         *ಅನುಪಮ*        ಹೆಣ್ಣಾಗಿ ಮೂಡಿಹಳು ಅದಮ್ಯ ಸೌಮ್ಯ ಶಕ್ತಿಯೇ ಬಣ್ಣಿಸಲು ಅಸದಳವೊ ಭಾವನಾ ಅಂಬುದಿಯೇ |ಪ| ಮಗುವಾಗಿ ನಗುವಾಗಿ ಅಮಿತ ಅನಿತೆ ಪೂಜಿತೆ ಒಡಹುಟ್ಟಿದ ಜೀವಗಳಿಗೆ ಮಿಡಿವ ಪ್ರೇಮ ಶೋಭಿತೆ|೧| ಸ್ನೇಹ ತೋರಿ ಸಖಿಯಾಗಿ ಹೃದಯಗೆದ್ದ ಅರಸಿಯಾಗಿ ಬಾಳಿನ ಅರ್ಧಾಂಗಿಯಾಗಿ ಬಾಳಿಸುವಳು ಗೃಹಿಣಿಯಾಗಿ|೨| ಮನ ನಿನ್ನದು ಹೂವಂತೆ ತನುವದೋ ಲತೆಯಂತೆ ಬರಡನಳಿಸೊ ಸೆಲೆಯಂತೆ ಮನೆಗೆ ನಂದಾ ದೀಪದಂತೆ |೩| ಮಮತೆಗೆ ಮಾತೃರೂಪಿಣಿ ಕ್ಷಮೆಗೆ ಭೂ ಸ್ವರೂಪಿಣಿ ಜ್ಞಾನದೊಳು ಶ್ರೀ ವಾಣಿ ನಮಿಸುವೆ ಸೃಷ್ಟಿಕಾರಿಣಿ |೪|        ................. ✍🏼 ತ್ರಿನೇತ್ರಜ  ಶಿವಕುಮಾರ. ಹಿರೇಮಠ. 🥀🥀🥀🥀🥀 ಹನಿ ಹನಿಯ ತುಂತುರು ಕಾವ್ಯ ಲೋಕದಲಿ... ಮೈಮರೆಸುವ ಕವಿಹೃದಯಗಳ ಕಾವ್ಯಗಳ ಸಾಗರ ದಲ್ಲಿ ಮನವಿಂದು ಮಿಂದು ಧನ್ಯವಾಗಿದೆ... 🦋🦋🦋🦋🦋🦋 *ಹನಿ ಹನಿ ತುಂತುರು ತಿಂಗಳ ವಿಶೇಷ ಸ್ಪರ್ಧೆಯ ಫಲಿತಾಂಶಕ್ಕೆ ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ ಸುಸ್ವಾಗತ...*  *ಈ ತಿಂಗಳ  ಸ್ಪರ್ಧೆಯ ವಿಷಯ* *ಒಂದು ಹೆಣ್ಣು ಗಂಡಿನ ಜೀವನದಲ್ಲಿ ತಾಯಿಯಾಗಿ ತಂಗಿಯಾಗಿ ಮಡದಿಯಾಗಿ ಗೆಳತಿಯಾಗಿ ತಂಗಿಯಾಗಿ ಪ್ರೇಯಸಿಯಾಗಿ ಹೆಂಡತಿಯಾಗಿ ಗಂಡಿನ...

ದಾಸನಾದೆ ಅಂದಕೆ

ಭಾವಗೀತೆ   *ದಾಸನಾದೆ ಅಂದಕೆ*  ನನ್ನ ಕಲ್ಪನೆಯಲ್ಲಿ ಬಂತೊಂದು ಲೋಕ ನೀನದರ ಒಡತಿ ನಾನು ನಿನ್ನ ಸೇವಕ ||ಪ|| ಹಂಸ ತೂಲಿಕಾತಲ್ಪದಿ ಚಂದ್ರಕಾಂತಿಯ ಧರಿಸಿ ನೀ ಪವಡಿಸಿರೆ ನಗುತ ಹಾಡಿ ತೂಗುವೆ ಅರಸಿ ಗಾನದೊಳು ಮೈ ಮರೆಸಿ ಆಡಿಸುವೆ ಕನಸ ಬಿತ್ತರಿಸಿ||೧|| ಶ್ವೇತ ಸಾಗರ ವದನದಿ ಮತ್ಸ್ಯಕಂಗಳನಾಡಿಸಿ ಮಂದಸ್ಮಿತ ಬೀರುವೆ ಮಧುವಧರ ಅರಳಿಸಿ ವೈಯ್ಯಾರದಲೆನ್ನ ಸೋಲಿಸಿ ದಾಸನಾಗಿಸಿಹಳೆನ್ನ  ಸರಸಿ||೨|| ****   ****   ****  **** ✍🏼.. ತ್ರಿನೇತ್ರಜ್ ಶಿವಕುಮಾರ. ಹಿರೇಮಠ