*ಅವಳು ಕೇಳಿದಾಗ*
ಹಿಂದೊಮ್ಮೆ ಕಾಲೇಜಲ್ಲಿ
ಕ್ಲಾಸಮೇಟು ಕೇಳಿದಳು
ಇಷ್ಟ ನನಗಾವುದೆಂದು
ಕನ್ನಡ ನಮ್ ಭಾಷೆ
ಇಂಗ್ಲಿಷು ಪರಭಾಷೆ
ಇಷ್ಟ ನನಗಾವುದೆಂದು
ಇದೊಳ್ಳೆ ಪೇಚಾಟವ
ತಂದಿಟ್ಟೆ ಮಹರಾಯ್ತಿ
ಇಂಥ ಪ್ರಶ್ನೆ ಕೇಳೊದೇಕೆ
ಇಂಗ್ಲಿಷ್ ಮಾಧ್ಯಮ ಓದೋ
ಅಚ್ಚ ಕನ್ನಡಿಗ ನಾನು
ವಿಸ್ತರಿಸಿ ಹೇಳಬೇಕೆ
ಕನ್ನಡ ಇಷ್ಟವೋ ಇಂಗ್ಲಿಷು ಇಷ್ಟವೋ
ಇಂಥ ಪ್ರಶ್ನೆ ಕೇಳೊದೇಕೆ
ವಿಸ್ತರಿಸಿ ಹೇಳಲೆ ಎಂದೆನಾಕೆಗೆ.
ಅರಳು ಹುರಿದಂತೆ ನಾನು
ಇಂಗ್ಲಿಷು ಮಾತನಾಡಲು
ಹುಡುಗರ ಹೊಟ್ಟೆ ಉರಿವುದು
ಅಚ್ಚರಿಯ ಮೆಚ್ಚುಗೆಯ
ಹುಡುಗಿಯರ ಕುಡಿನೋಟ
ನನ್ನತ್ತ ಹರಿದು ಬರುವುದು
ಪ್ರೊಫೆಸರ್ಸ ನನ್ನ ಜೊತೆಗೆ
ನಗುನಗುತ ಮಾತಾಡಲು
ಹೆಮ್ಮೆಯಿಂದ ಎದೆಯುಬ್ಬುವುದು
ಮನೆಸೇರಲು ಅಮ್ಮನ
ಕನ್ನಡದ ಸಿಹಿ ನುಡಿಯು
ಮನಕೇನೋ ತಂಪನೆರೆವುದು
ಉದ್ಯೋಗ ಕೈಗೆಟಕಲು
ವಿದೇಶಕೂ ಛಾಪು ಹಾಕಲು
ಇಂಗ್ಲಿಷಿನ ಚಮಕ್ಕು ಬೇಕು
ಮನದಾಳದ ಭಾವವ
ಹಾಡಾಗಿ ಉಕ್ಕಿಸಲು
ಕನ್ನಡವೇ ಕೈಹಿಡಿಬೇಕು
ಎಡವಟ್ಟು ಪ್ರಶ್ನೆ ಇಟ್ಟು
ತಲೆಗೆ ಹುಳವನು ಬಿಟ್ಟು
ನಗುತಿರುವೆಯಲ್ಲ ನೀನು
ಇಂಗ್ಲಿಷ್ ಪಿರಿಡಿನ
ಸಮಯವಾಯಿತು ನೋಡು
ಬೆಲ್ಲಾಯ್ತು ನಡಿ ಇನ್ನು.
ತ್ರಿನೇತ್ರಜ
(ಶಿವಕುಮಾರ ಹಿರೇಮಠ)
Comments
Post a Comment